

ಗೋಣಿಕೊಪ್ಪಲು: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ 108 ವರ್ಷಗಳನ್ನು ಪೂರೈಸಿದ್ದು, ಫೆ.2 ರಂದು ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಪೂರ್ವ ಸಿದ್ಧತೆ ನಡೆಯುತ್ತಿದೆ.
ಸುಮಾರು 4 ಗಂಟೆ ಅವಧಿಯ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಹಾಸ್ಯ ಪ್ರಹಸನ, ಮೂಕಾಭಿನಯ, ಕಿರುನಾಟಕ, ಕಂಸಾಳೆ ನೃತ್ಯ, ದೇಶ ಭಕ್ತಿ ಬಿಂಬಿಸುವ ನೃತ್ಯ, ಜಾನಪದ ನೃತ್ಯ, ಗೀತ ಗಾಯನ, ಹಲವು ಆಕರ್ಷಕ ನೃತ್ಯ ಪ್ರಕಾರಗಳ ಹೂರಣ ಇದೆ. ಇದೇ ಪ್ರಪ್ರಥಮ ಬಾರಿಗೆ ಸರ್ಕಾರಿ ಪ್ರಾಥಮಿಕ ಹಾಗೂ ಸರ್ಕಾರಿ ಪ್ರೌಢಶಾಲೆಯ ಸುಮಾರು 40 ವಿದ್ಯಾರ್ಥಿಗಳು ಸೇರಿ ವಿಭಿನ್ನ ಹಾವಭಾವ, ನಟನೆ ಮೂಲಕ ಮನರಂಜನೆ ನೀಡಲಿದ್ದಾರೆ.
ಸೈಕ್ಲೋನ್ ತಂಡದ ಮುಖ್ಯಸ್ಥ ರಮೇಶ್, ಶಕೀಲ್ ಅಹಮ್ಮದ್, ನೃತ್ಯ ನಿರ್ದೇಶನ ತಂಡ ಸುಮಾರು 16 ನೃತ್ಯ ಕಾರ್ಯಕ್ರಮಗಳಿಗೆ ತರಬೇತಿ ನೀಡುತ್ತಿದ್ದು, ನೃತ್ಯ ನಿರ್ದೇಶಕಿ ಲಿದಿನಾ ಅವರ ಎರಡು ವಿಭಿನ್ನ ನೃತ್ಯ, ವೀರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿನಿಯರಿಂದ ಕೊಡವ ಡಾನ್ಸ್, ಟಿ.ಎಲ್.ಶ್ರೀನಿವಾಸ್ ನಿರ್ದೇಶನದ ದಾರಿ ಯಾವುದಯ್ಯ? ಕಿರು ನಾಟಕ ಪ್ರದರ್ಶನ, ಕಾಡು ಬೆಳೆಸಿ ನಾಡು ಉಳಿಸಿ ಮೂಕಾಭಿನಯ, ಲೈನ್‌ಮೆನ್ ಡ್ಯಾಡಿ, ಬನ್ನೂರು ಬಿರಿಯಾನಿ, ಉದ್ಯೋಗಸ್ಥ ಮಹಿಳೆ ಹಾಸ್ಯ ಪ್ರಹಸನ, ಕಾಡ್ಯಮಾಡ ನವೀನ್, ಸುಮನ್ ಸಹೋದರರ ಪ್ರಾಯೋಜಕತ್ವದ ವಿಕ್ರಂ ಜಾದೂಗಾರ್ ಅವರ ಜಾದೂ ಪ್ರದರ್ಶನ, 4ನೇ ತರಗತಿ ವಿದ್ಯಾರ್ಥಿಗಳು-ಪಾಲಕರ ನೃತ್ಯ, ಹಿರಿಯ ವಿದ್ಯಾರ್ಥಿನಿ, ಗ್ರಾಪಂ ಸದಸ್ಯೆ ಗೀತಾ ತಂಡದ ನೃತ್ಯ, ಹಲವು ಹಿರಿಯ ವಿದ್ಯಾರ್ಥಿಗಳ ಗೀತೆಗಳು ಇನ್ನೂ ಹಲವು ವಿಭಿನ್ನ ಕಾರ್ಯಕ್ರಮ ನೀಡಲು ವೇದಿಕೆ ಸಜ್ಜಾಗಿದೆ.
ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಫೆ.2 ರಂದು ಸಂಜೆ 7 ಗಂಟೆಗೆ ನಡೆಯುವ ಕಾರ್ಯಕ್ರಮ ಯಶಸ್ವಿಗೊಳ್ಳಲು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಜಿ.ಮೋಹನ್ ಮತ್ತು ಪದಾಧಿಕಾರಿಗಳು, ಕಾರ್ಯಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಶಾಲಾ ಮುಖ್ಯಶಿಕ್ಷಕ ಎಚ್.ಕೆ.ಕುಮಾರ್, ನೃತ್ಯ ನಿರ್ದೇಶಕರಾದ ರಮೇಶ್, ಶಕೀಲ್ ಅಹಮ್ಮದ್ ಮತ್ತು ತಂಡ, ಲಿದಿನಾ, ಸಮಿತಿಯ ಶಿಕ್ಷಕ ಸದಸ್ಯರಾದ ಇಂದಿರಾ, ಜೋಸ್ಲಿಲಾ, ದಮೆಯಂತಿ, ಅನಿತಾ, ಗ್ರಾಪಂ ಸದಸ್ಯರಾದ ಚೈತ್ರಾ ಬಿ.ಚೇತನ್, ರತಿ ಅಚ್ಚಪ್ಪ, ಪುಷ್ಪ, ಗೀತಾ, ಮೈಕ್ ಮಣಿ, ವಕೀಲ ಸಂಜೀವ್,ಕಾಡ್ಯಮಾಡ ಸುಮನ್, ವೇದಿಕೆ ಸಮಿತಿ ಸಹಕಾರದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಪೂರ್ವ ತಯಾರಿ ಬಿರುಸಿನಿಂದ ನಡೆಯುತ್ತಿರುವದಾಗಿ ಸಮಿತಿ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.