

ಗುರುಪುರ: ವಾಮಂಜೂರು ತಿರುವೈಲಿನ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೀಗ ನೂರರ ಸಂಭ್ರಮ. ಮಕ್ಕಳ ಕೊರತೆಯಿಂದ ಶಾಲೆ ಮುಚ್ಚುವ ಹಂತ ತಲುಪಿತ್ತು. ಶಿಕ್ಷಕರ ಕಾಳಜಿ, ಸಂಘ ಸಂಸ್ಥೆಗಳು, ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯಿಂದಾಗಿ ಶಾಲೆ ಉಳಿದುಕೊಂಡು ಶತಮಾನೋತ್ಸವ ಆಚರಿಸುತ್ತಿದೆ. ಏ.5, 6ರಂದು ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಶಾಲಾಭಿವೃದ್ಧಿಯೊಂದಿಗೆ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸುತ್ತ ಕಳೆದ 32 ವರ್ಷಗಳಿಂದ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗೋಪಾಲ ಯು. ಶಾಲಾ ಶತಮಾನೋತ್ಸವ ಸಂಭ್ರಮದ ಹಿಂದಿನ ಶಕ್ತಿಯಾಗಿ ಮೂಡಿ ಬಂದಿದ್ದಾರೆ. ಮುಖ್ಯ ಶಿಕ್ಷಕರಿಲ್ಲದ ಅವಧಿಯಲ್ಲಿ ಪ್ರಭಾರ ಮುಖ್ಯಶಿಕ್ಷಕರಾಗಿದ್ದ ವೇಳೆ ಶಿಕ್ಷಕ ಗೋಪಾಲ್ ಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಜಾ ದಿನಗಳಲ್ಲೂ ಶಾಲೆಗೆ ಬಂದು ಉದ್ಯಾನವನದ ಗಿಡಗಳಿಗೆ ನೀರೆರೆಯುತ್ತಾರೆ. ತಮ್ಮ ಸಂಬಳದ ಒಂದಷ್ಟು ಮೊತ್ತವನ್ನು ಶಾಲಾಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. ಇದು ಗೋಪಾಲ ಅವರಿಗಿರುವ ಶಾಲೆ ಮೇಲಿನ ಪ್ರೀತಿ, ಕಾಳಜಿಯನ್ನು ತೋರಿಸುತ್ತದೆ. ಮಕ್ಕಳೇ ತನಗೆ ಪ್ರಶಸ್ತಿ: ಕಳೆದ 32 ವರ್ಷಗಳಿಂದ ದೈಹಿಕ ಶಿಕ್ಷಣದೊಂದಿಗೆ ಶಾಲೆಯಲ್ಲಿ ಗಣಿತ ಮತ್ತು ಇಂಗ್ಲಿಷ್ ಪಾಠ ಬೋಧಿಸುತ್ತಿರುವ ಗೋಪಾಲ್ ಮಕ್ಕಳಿಗೆ ನೈತಿಕ ಶಿಕ್ಷಣ, ಶೈಕ್ಷಣಿಕ ಸಂಸ್ಕಾರಗಳ ಬಗ್ಗೆಯೂ ತಿಳಿಸಿಕೊಡುತ್ತಾರೆ. ಪ್ರಶಸ್ತಿಗಾಗಿ ಕೆಲಸ ಮಾಡುತ್ತಿಲ್ಲ, ಶಾಲಾ ಮಕ್ಕಳೇ ನನ್ನ ಆಸ್ತಿ, ಪ್ರಶಸ್ತಿ ಎನ್ನುತ್ತಾರೆ. ಕುಂದಾಪುರದ ತೆಕ್ಕಟ್ಟೆ ಮೂಲದವರು. ಇನ್ನು 3 ವರ್ಷ ಸೇವೆ ಬಾಕಿ ಉಳಿದಿದ್ದು, ನಿವೃತ್ತಿ ಬಳಿಕವೂ ಸಮೀಪದಲ್ಲೇ ಮನೆ ಮಾಡಿಕೊಂಡು ಶಾಲೆಯ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಶಾಲೆ ನಡೆದು ಬಂದ ದಾರಿ 1925ರಲ್ಲಿ ತಿರುವೈಲಿನ ತಂತ್ರಿಬೆಟ್ಟಿವಿನಲ್ಲಿ 1ರಿಂದ 5ನೇ ತರಗತಿವರೆಗೆ ಮುಳಿಹುಲ್ಲಿನ ಮೇಲ್ಛಾವಣಿಯ ಕಟ್ಟಡದಲ್ಲಿ ಶಾಲೆ ಆರಂಭಗೊಂಡಿತ್ತು. 1965ರಲ್ಲಿ ಕೆಲರೈ ನಾರಾಯಣ ಮಲ್ಲಿ, ಐಕಳ ಪದ್ಮನಾಭ ಶೆಟ್ಟಿ ಮತ್ತಿತರ ಸವಾನ ಮನಸ್ಕರ ಪ್ರಯತ್ನದಿಂದ ಈಗಿರುವಲ್ಲಿಗೆ ಶಾಲಾ ಕಟ್ಟಡ ಸ್ಥಳಾಂತರಗೊಂಡಿತ್ತು. ಆಗ ಶಾಲೆಯಲ್ಲಿ ಸುವಾರು 700 ವಿದ್ಯಾರ್ಥಿಗಳು ಕಲಿಯುತ್ತಿದ್ದರು. 2017ರ ಹೊತ್ತಿಗೆ ವಿದ್ಯಾರ್ಥಿಗಳ ಸಂಖ್ಯೆ 50-60ಕ್ಕೆ ಕ್ಷೀಣಿಸಿತು. ಶಾಲೆ ಮುಚ್ಚುವ ಹಂತ ತಲುಪಿದಾಗ ‘ವಿದ್ಯಾಬೋಧಿನಿ ಎಜುಕೇಶನ್ ಟ್ರಸ್ಟ್’ ಸ್ಥಾಪಿಸಿ ಎಲ್ಕೆಜಿ, ಯುಕೆಜಿ ಹಾಗೂ 1-5ನೇ ತರಗತಿ ವರೆಗೆ ಆಂಗ್ಲ ಮಾಧ್ಯಮ ಆರಂಭಿಸಲಾಯಿತು. ಪ್ರಸ್ತುತ ಶಾಲೆಯಲ್ಲಿ 320ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಶತಮಾನೋತ್ಸವ ಸವಿನೆನಪಿಗಾಗಿ ಮೂರಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ.
ಮಕ್ಕಳ ಕೊರತೆಯಿಂದ ಮುಚ್ಚುವ ಹಂತದಲ್ಲಿದ್ದ ಶಾಲೆಯು ಶಿಕ್ಷಕ ಗೋಪಾಲ್ ಸರ್ ಅವರ ಛಲ, ಊರವರ, ಸ್ಥಳೀಯ ಕಾರ್ಪೊರೇಟರ್ ಇಚ್ಛಾಶಕ್ತಿಯಿಂದ ಉಳಿದುಕೊಂಡಿದೆ ಗಿರೀಶ್ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಹಲವಾರು ಎಡರುತೊಡರುಗಳನ್ನು ದಾಟಿ ಮುನ್ನಡೆಯುತ್ತಿರುವ ಶಾಲೆಯ ಶತಮಾನೋತ್ಸವ ಸಂಭ್ರಮದ ಹಿಂದೆ ಹಲವರ ಶ್ರಮವಿದೆ. ಮುಖ್ಯವಾಗಿ ಶಾಲೆಗಾಗಿ ನಿಸ್ವಾರ್ಥವಾಗಿ ದುಡಿಯುತ್ತಿರುವ ದೈಹಿಕ ಶಿಕ್ಷಕ ಗೋಪಾಲ್ ಅಭಿನಂದನಾರ್ಹರು. ಹೇಮಲತಾ ಆರ್.ಸಾಲ್ಯಾನ್, ಮಾಜಿ ಕಾರ್ಪೊರೇಟರ್ ತಾನು ಕಲಿತ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಂತೋಷವಾಗುತ್ತಿದೆ. ಈ ಶಾಲೆಯಲ್ಲಿ 5ನೇ ತರಗತಿಯವರೆಗೆ ಕಲಿತಿದ್ದೇನೆ. ಶಾಲೆಯ ಮೇಲಿನ ವ್ಯಾಮೋಹ ನನ್ನನ್ನು ಅನಿರೀಕ್ಷಿತವಾಗಿ ಇಲ್ಲಿಗೆ ಎಳೆದು ತಂದಿದೆ. ಪಿ.ವೇಲುಸ್ವಾಮಿ, ಕಾರ್ಕಳದ ಶಿಲ್ಪಿ ಕೆಲವು ವರ್ಷಗಳ ಹಿಂದೆ ಮುಚ್ಚುವ ಹಂತ ತಲುಪಿದ್ದ ಈ ಶಾಲೆಯು ಸವಾನ ಮನಸ್ಕರ ಪ್ರಯತ್ನದಿಂದ ಪುನಃ ಉಸಿರಾಡುವಂತಾಗಿದೆ. ಶಿಕ್ಷಕ ಗೋಪಾಲರು ಶಾಲೆಯ ಬೆನ್ನೆಲುಬಾಗಿ ನಿಂತಿದ್ದಾರೆ ಪ್ರತೋಷ್ ಮಲ್ಲಿ