

ಅನ್ಸಾರ್ ಇನೋಳಿ ಉಳ್ಳಾಲ
ಅಂಬ್ಲಮೊಗರು ಸರ್ಕಾರಿ ಪ್ರಾಥಮಿಕ ಶಾಲೆ ಶತಮಾನ ಕಂಡ ಮಂಗಳೂರು ಮತ್ತು ಉಳ್ಳಾಲ ತಾಲೂಕಿನ ಏಕೈಕ ಶಾಲೆ ಎನಿಸಿಕೊಂಡಿದೆ. ಆದರೂ ಇಲ್ಲಿ ಸಮಸ್ಯೆಗಳು ಜೀವಂತ. ಶತಮಾನೋತ್ಸವ ಸಮಿತಿ ಅಸ್ತಿತ್ವಕ್ಕೆ ತರಲಾಗಿದ್ದು ಶಾಲೆ ಅಭಿವೃದ್ಧಿಗೆ ವಿವಿಧ ಯೋಜನೆಗಳ ನೀಲಿನಕ್ಷೆ ತಯಾರಿಸಲಾಗಿದೆ.
ಅಂಬ್ಲಮೊಗರು ಎನ್ನುವುದು ಸಣ್ಣ ಗ್ರಾಮ. ಇಲ್ಲಿಗೆ ಇಂದಿಗೂ ಇರುವುದು ಬೆರಳೆಣಿಕೆಯ ಬಸ್ ವ್ಯವಸ್ಥೆ. ಆದರೂ ಇಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಪ್ರಾಥಮಿಕ ಶಾಲೆ ಆರಂಭಗೊಂಡಿತ್ತು ಎನ್ನುವುದು ಸೋಜಿಗ!
1924ರಲ್ಲಿ 12 ವಿದ್ಯಾರ್ಥಿ ದಾಖಲಾತಿಯೊಂದಿಗೆ ಅಂಬ್ಲಮೊಗರು ಬೋರ್ಡ್ ಎಲಿಮೆಂಟರಿ ಶಾಲೆ ಹೆಸರಲ್ಲಿ ಒಂದನೇ ತರಗತಿ ಆರಂಭಿಸಲಾಗಿತ್ತು. ಐತಪ್ಪ ರೈ ಶಿಕ್ಷಕರಾಗಿದ್ದರು. ಪಟ್ನಮೊಗರು ವಾಮಯ್ಯ ಶೆಟ್ಟಿ, ಹರೇಕಳಗುತ್ತು ಕಾಂತಪ್ಪ ರೈ ಮತ್ತು ಎಲ್ಯಾರ್ ತಿಮ್ಮಯ್ಯ ಶೆಟ್ಟಿ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಮಿತಿ ಅಸ್ತಿತ್ವಕ್ಕೆ ತರಲಾಗಿತ್ತು. ಆ ಸಂದರ್ಭ ಎರಡು ಸಣ್ಣ ಕೋಣೆಗಳಿದ್ದರೂ ಶಿಕ್ಷಣಕ್ಕೆ ಯೋಗ್ಯವಾಗಿರಲಿಲ್ಲ. ಅಂಗಳದಲ್ಲೇ ಪಾಠ ಮಾಡಲಾಗುತ್ತಿತ್ತು. 1929ರಲ್ಲಿ ಹೊಸ ಕಟ್ಟಡ ನಿರ್ಮಾಣವಾದರೂ ಪಾಠಕ್ಕೆ ಯೋಗ್ಯವಾಗಿರಲಿಲ್ಲ. ಆ ಕಾರಣದಿಂದ ಶಾಲೆ ಹೊರಭಾಗದಲ್ಲೇ ಪಾಠ ಮಾಡಲಾಗುತ್ತಿತ್ತು ಎನ್ನುವುದು ಅಂದಿನ ವರದಿಗಳು ಹೇಳುತ್ತವೆ. ಪ್ರತಿವರ್ಷ ಶಾಲಾ ತರಗತಿಗಳ ಬೆಳವಣಿಯಾಗಿದ್ದು ಕೊನೆಗೆ 8ನೇ ತರಗತಿಗೆ ಸೀಮಿತಗೊಳಿಸಲಾಯಿತು. ಆಸುಪಾಸಿನ ಗ್ರಾಮಗಳ ಮಕ್ಕಳ ಶಿಕ್ಷಣಕ್ಕೆ ಏಕೈಕ ಆಸರೆಯಾಗಿದ್ದರಿಂದ ಪ್ರತಿ ವರ್ಷ 500ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಶಾಲೆಯಲ್ಲಿದ್ದರು ಎನ್ನುವ ಮಾಹಿತಿ ಶಾಲೆಯ ದಾಖಲಾತಿಯಲ್ಲಿದೆ.
ಎಂಟನೇ ತರಗತಿ ಬಳಿಕ ಮಕ್ಕಳ ಕಲಿಕೆ ಸಮಸ್ಯೆಯಾಗಿದ್ದರಿಂದ ಪ್ರೌಢಶಾಲೆ ಬೇಡಿಕೆ ಎದುರಾಯಿತು. 2014-15ನೇ ಸಾಲಿನಿಂದ ಪ್ರೌಢಶಾಲೆ ಆರಂಭಗೊಂಡು ಒಂಬತ್ತು ವರ್ಷ ಪ್ರಾಥಮಿಕ ಶಾಲೆಯ ಕಟ್ಟಡದಲ್ಲೇ ಮುಂದುವರಿಯಿತು. ಶಿಕ್ಷಕರ ನೇಮಕಾತಿಯಾಗದ ಕಾರಣ ಪ್ರಾಥಮಿಕ ಶಾಲೆ ಶಿಕ್ಷಕರೇ ಜವಾಬ್ದಾರಿ ನಿರ್ವಹಿಸಿ ಎಸ್‌ಎಸ್‌ಎಲ್‌ಸಿ ಮೊದಲ ಬ್ಯಾಚ್‌ನಲ್ಲಿ ಶೇ.85 ಫಲಿತಾಂಶ ಕಾಣುವಂತೆ ಮಾಡಿದ್ದರು. 2023-24ನೇ ಸಾಲಿನಿಂದ ಪ್ರೌಢಶಾಲೆಗೆ ಪ್ರತ್ಯೇಕ ಕಟ್ಟಡ ನಿರ್ಮಾಣವಾಗಿದೆ.
ಆಂಗ್ಲ ಮಾಧ್ಯಮ ವ್ಯಾಮೋಹ ಪರಿಣಾಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕುಂಠಿತಗೊಳ್ಳತೊಡಗಿತು. ಶಾಲಾಭಿವೃದ್ಧಿ ಸಮಿತಿ ಬೇಡಿಕೆಯಂತೆ 2017-18ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಸರ್ಕಾರ ಅನುಮತಿ ನೀಡಿತು. ಪ್ರಸ್ತುತ ಎಲ್‌ಕೆಜಿಯಿಂದ ಆರನೇ ತರಗತಿವರೆಗೆ ಆಂಗ್ಲ ಮಾಧ್ಯಮ ತರಗತಿಗಳು, ಒಂದರಿಂದ ಎಂಟರವರೆಗೆ ಕನ್ನಡ ಮಾಧ್ಯಮ ತರಗತಿಗಳಿದ್ದು ಒಟ್ಟು 216 ವಿದ್ಯಾರ್ಥಿಗಳಿದ್ದಾರೆ.
ಒಂಬತ್ತು ಶಿಕ್ಷಕರ ಹುದ್ದೆ ಇದ್ದರೂ 7 ಶಿಕ್ಷಕ ಹುದ್ದೆ ಭರ್ತಿಯಾಗಿವೆ. ಇಬ್ಬರು ಅತಿಥಿ ಉಪನ್ಯಾಸಕರು, ಓರ್ವ ಸ್ಥಳೀಯ ಶಿಕ್ಷಕಿ ಇದ್ದಾರೆ. ಇವರಿಗೆ ಪಾಲಕರು, ಶಿಕ್ಷಕರ ಹಣದಿಂದ ವೇತನ ನೀಡಲಾಗುತ್ತಿದೆ. ಶಾಲೆಯಲ್ಲಿ ಎಂಟು ಕೋಣೆಗಳಿದ್ದು ಅವುಗಳ ಪೈಕಿ ಮೂರು ಕೋಣೆಗಳ ಕಟ್ಟಡ ಕೆಡವಲು ಆದೇಶ ಬಂದಿದೆ. ಓರ್ವ ಆಯಾ ಇದ್ದು ಅವರಿಗೆ ಪಾಲಕರು ವೇತನ ನೀಡುತ್ತಾರೆ.
ಆಂಗ್ಲ ಶಿಕ್ಷಣದ ಬಿರುಗಾಳಿ ಮತ್ತು ವಾಹನ ಸಮಸ್ಯೆ ಪರಿಣಾಮ ಪ್ರತಿವರ್ಷ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಾ ಹೋಯಿತು. ಪರಿಹಾರ ಕಂಡುಕೊಳ್ಳಲು ಮುಂದಾದ ಶಿಕ್ಷಕರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಲು ಮತ್ತು ಹೋಗಲು ವಾಹನ ವ್ಯವಸ್ಥೆ ಮಾಡಿದ್ದರು. ನಾಲ್ಕು ವರ್ಷ ಈ ವ್ಯವಸ್ಥೆ ಮುಂದುವರಿದಿದ್ದು ಮಕ್ಕಳ ಸಂಖ್ಯೆ ಹೆಚ್ಚಿಸುವಲ್ಲಿ ಸಹಕಾರಿಯಾಯಿತು. ವಾಹನದ ಬಾಡಿಗೆಯಾಗಿ ಶಿಕ್ಷಕರೆ ತಿಂಗಳಿಗೆ 12 ಸಾವಿರ ರೂ. ಭರಿಸುತ್ತಿದ್ದರು. ಕರೊನಾ ಸಂದರ್ಭ ಈ ವ್ಯವಸ್ಥೆ ನಿಲ್ಲಿಸಲಾಗಿದೆ.
ಶಾಲೆಯ ಹೆಸರಲ್ಲಿ 1.28 ಸೆಂಟ್ಸ್ ಜಮೀನು ಇದೆ. ಪ್ರಸ್ತುತ ಇರುವ ಕಟ್ಟಡಗಳು ಹಂಚಿನದ್ದು. ಶತಮಾನೋತ್ಸವ ಹಿನ್ನೆಲೆಯಲ್ಲಿ ಹಳೇ ವಿದ್ಯಾರ್ಥಿಗಳು ಮತ್ತು ಗಣ್ಯರ ಸಮಿತಿ ಅಸ್ತಿತ್ವಕ್ಕೆ ತರಲಾಗಿದ್ದು ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಶತಮಾನೋತ್ಸವ ಸ್ಮಾರಕ ಸಭಾಭವನ, ಮೂರು ತರಗತಿಗಳಿಗೆ ಕೊಠಡಿ ನಿರ್ಮಾಣ, ಬಯಲು ರಂಗಮಂದಿರ, ಅಡುಗೆ ಮತ್ತು ದಾಸ್ತಾನು ಕೊಠಡಿ, ಬಾಲ ಉದ್ಯಾನವನ, ಶತಮಾನೋತ್ಸವ ಸ್ಮಾರಕ ದ್ವಾರ, ಸಿಸಿಟಿವಿ ಅಳವಡಿಕೆ, ಪೀಠೋಪಕರಣ ಸೌಲಭ್ಯ, ವಾಚನಾಲಯ ಕೊಠಡಿ, ಪ್ರಯೋಗಾಲಯ ನಿರ್ಮಾಣಕ್ಕೆ ನೀಲೀನಕ್ಷೆ ತಯಾರಿಸಲಾಗಿದೆ. ಸ್ಪೀಕರ್ ಯು.ಟಿ.ಖಾದರ್ ಅವರು ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಶಾಲಾ ಕಟ್ಟಡ ದುರಸ್ತಿಗೆ 20 ಲಕ್ಷ ರೂ. ಅನುದಾನ ಮಂಜೂರುಗೊಳಿಸಿದ್ದಾರೆ.
ಶತಮಾನೋತ್ಸವ ಕಂಡಿರುವ ನಾಲ್ಕು ಪ್ರಾಥಮಿಕ ಶಾಲೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಹಿಂದಿನ ಮಂಗಳೂರು ಈಗಿನ ಉಳ್ಳಾಲ ತಾಲೂಕಿನಲ್ಲಿ ಅಂಬ್ಲಮೊಗರು, ಮೂಡುಬಿದಿರೆ ತಾಲೂಕಿನ ಬೆಳವಾಯಿಯಲ್ಲಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕಡಬ ತಾಲೂಕಿನ ಹಳೆನೇರಂಕಿ ಮತ್ತು ಸುಳ್ಯ ತಾಲೂಕಿನ ಅಜ್ಜಾವರದಲ್ಲಿರುವ ಶಾಲೆ ಶತಮಾನ ಕಂಡಿವೆ. ಈ ಶಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಶಿಕ್ಷಣ ಇಲಾಖೆಯ ದ.ಕ. ಜಿಲ್ಲಾ ಡಿಡಿಪಿಐ ರಾಜ್ಯ ಆಯುಕ್ತರಿಗೆ ವರದಿ ನೀಡಿದ್ದಾರೆ. ಆದರೆ ಇನ್ನೂ ಅನುದಾನ ಬಂದಿಲ್ಲ.
ಈ ಶಾಲೆಗೆ ನೂರು ವರ್ಷ ಆಗಿರುವ ಬಗ್ಗೆ ಸರ್ಕಾರಿ ದಾಖಲೆಗಳು ಹೇಳುತ್ತವೆ. ಆದರೆ ಅದಕ್ಕಿಂತ ಮೊದಲೇ ಗ್ರಾಮದಲ್ಲಿ ಶಾಲೆ ಇತ್ತು. ಆ ಕಾಲದಲ್ಲಿ ತಮ್ಮ ಹೆತ್ತವರು ಸ್ವಗ್ರಾಮದಲ್ಲೇ ಅಕ್ಷರ ಜ್ಞಾನ ಪಡೆದಿದ್ದರು ಎನ್ನುತ್ತಾರೆ ಗ್ರಾಮದ ಹಿರಿಯರು. 1914ಕ್ಕೆ ಮೊದಲೇ ಶ್ಯಾನುಭೋಗರ ಹಂತದಲ್ಲಿ ಎಂಬಲ್ಲಿರುವ ಖಾಸಗಿ ಜಾಗದಲ್ಲಿ ಪಡ್ಯಾರಮನೆಯ ಕಾವೇರಿಯಕ್ಕ ಎಂಬುವರು ಸಣ್ಣ ಕಟ್ಟಡ ನಿರ್ಮಿಸಿ ಬಾಡಿಗೆ ಆಧಾರದಲ್ಲಿ ಶಾಲೆ ನಡೆಸಲು ನೀಡಿದ್ದರು. 1923ರಲ್ಲಿ ಬಂದ ನೆರೆಗೆ ಈ ಕಟ್ಟಡ ಬಿದ್ದಿತ್ತು ಎನ್ನಲಾಗಿದೆ. ಈಗ ಶಾಲೆಯಿರುವ ಜಾಗ ಎತ್ತರದ ಪ್ರದೇಶವಾಗಿದ್ದರಿಂದ ನೆರೆ ಹಾವಳಿಯಿಂದ ರಕ್ಷಿಸುವ ನಿಟ್ಟಿನಲ್ಲಿ ಮುಂದಿನ ವರ್ಷ ಶಾಲೆಯನ್ನು ಇಲ್ಲಿಗೆ ವರ್ಗಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 1924ಕ್ಕೆ ಶಾಲೆ ಸ್ಥಾಪನೆಗೊಂಡಿರುವುದಾಗಿ ಸರ್ಕಾರಿ ದಾಖಲೆಗಳಲ್ಲಿ ತೋರಿಸಲಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.
ಶತಮಾನ ಕಂಡಿರುವ ದ.ಕ. ಜಿಲ್ಲೆಯ ನಾಲ್ಕು ಶಾಲೆಗಳ ಪೈಕಿ ಅಂಬ್ಲಮೊಗರು ಶಾಲೆಯೂ ಒಂದು. ಶತಮಾನೋತ್ಸವ ಸಂಭ್ರಮ ಅರ್ಥಪೂರ್ಣವಾಗಿಸಲು ಹಳೇ ವಿದ್ಯಾರ್ಥಿಗಳು ಹಾಗೂ ಗಣ್ಯರ ಸಮಿತಿ ರಚಿಸಲಾಗಿದ್ದು ಶತಮಾನೋತ್ಸವ ಭವನ ನಿರ್ಮಾಣ ಸಹಿತ ವಿವಿಧ ಯೋಜನೆ ರೂಪಿಸಲಾಗಿದೆ. ಸರ್ಕಾರದ ಅನುದಾನ ಬಂದಲ್ಲಿ ಅನುಕೂಲವಾಗಲಿದೆ. - ಜಗದೀಶ್ ಶೆಟ್ಟಿ, ಮುಖ್ಯಶಿಕ್ಷಕ, ಅಂಬ್ಲಮೊಗರು ಶಾಲೆ ಸರ್ಕಾರಿ ದಾಖಲೆಗಳಲ್ಲಿ ಶಾಲೆಗೆ ನೂರು ವರ್ಷ ಆಗಿರುವ ಬಗ್ಗೆ ತಿಳಿಸಲಾಗಿದೆ. ನಾವೆಲ್ಲಾ ಕಲಿತ ಶಾಲೆಯ ಶತಮಾನದ ಸಂಭ್ರಮಕ್ಕೆ ಮೆರುಗು ನೀಡುವ ಸಲುವಾಗಿ ಸಮಿತಿ ರಚಿಸಿ ಹಲವು ಯೋಜನೆ ಹಾಕಿಕೊಳ್ಳಲಾಗಿದ್ದು, ದಾನಿಗಳು ಮತ್ತು ಸರ್ಕಾರದ ನೆರವು ಯಾಚಿಸಲಾಗುವುದು. - ಮೊಹಮ್ಮದ್ ರಫೀಕ್ ಅಂಬ್ಲಮೊಗರು, ಕಾರ್ಯಾಧ್ಯಕ್ಷರು, ಶತಮಾನೋತ್ಸವ ಸಮಿತಿ https://www.vijayavani.net/deen-dayal-birthday-celebration https://www.vijayavani.net/3-44-lakhs-profit-to-enittadka-womens-cooperative