

ಉಡುಪಿ: ಪರ್ಕಳ ಗ್ಯಾಟ್ಸನ್ ಅಚ್ಯುತ ನಗರ ನಿವಾಸಿ ಮೈಕಲ್ ಡಿಸೋಜಾ (108 ವರ್ಷ) ಸೆ. 8 ರಂದು ನಿಧನರಾದರು.
16.10.1914ರಲ್ಲಿ ಜನಿಸಿದ್ದ ಅವರು, ಸ್ವಾತಂತ್ರೃ ಪೂರ್ವದಲ್ಲಿ ಮದ್ರಾಸ್ ಸರ್ಕಾರದಲ್ಲಿ ಸೈನ್ಯಕ್ಕೆ ಸೇರಿ ಮೆಕಾನಿಕಲ್ ಕಮ್ ಡ್ರೈವರ್ ಹತ್ತು ವರ್ಷ ಸೇವೆ ಸಲ್ಲಿಸಿದ್ದರು. ನಂತರ ಪಿಡಬ್ಲ್ಯೂಡಿ ಇಲಾಖೆಗೆ ಸೇರಿ ಉಡುಪಿ ರಥಬೀದಿಯ ಸುತ್ತ ನಾಲ್ಕು ಬೀದಿಗಳಲ್ಲಿ ಕಾಂಕ್ರೆಟ್ ರಸ್ತೆ, ಮಂಗಳೂರಿನ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಕೂಳೂರು ಸೇತುವೆ, ಮಲ್ಪೆ ಕಲ್ಮಾಡಿ ಸೇತುವೆ, ಬೈಂದೂರಿನ ಸೇತುವೆ ಸಹಿತ ಉಭಯ ಜಿಲ್ಲೆಯ ಹೆಚ್ಚಿನ ಹಳೆಯ ಸೇತುಗಳನ್ನು ನಿರ್ಮಿಸುವಾಗ ಮೇಲುಸ್ತುವಾರಿ ವಹಿಸಿದ್ದರು.
ಶತಾಯುಷಿಯಾಗಿದ್ದರೂ ಕಣ್ಣ ದೃಷ್ಟಿ ಸೂಕ್ಷ್ಮವಾಗಿತ್ತು. ಹೀಗಾಗಿ ಮಂಗಳೂರಿನ ಆರ್‌ಟಿಓ ಕಚೇರಿ 2024ರ ತನಕ ಚತುಷ್ಚಕ್ರ ಡ್ರೈವಿಂಗ್ ಲೈಸೆನ್ಸ್ ನೀಡಿತ್ತು. ಮೈಕಲ್ ಅವರ ತಾಯಿ ಕೂಡ 108 ವರ್ಷ ಬದುಕಿದ್ದರು. ಪತ್ನಿ 98ನೇ ವಯಸ್ಸಿನಲ್ಲಿ ನಿಧನರಾದ ಬಳಿಕ ಮಕ್ಕಳಿಲ್ಲದ ಮೈಕಲ್ ಅವರು ಪರ್ಕಳದ ಸಂಬಂಧಿಕರ ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದರು. ಮಂಗಳವಾರ ಹಠಾತ್ ಅಸ್ವಸ್ಥಗೊಂಡ ಅವರು ಮೋಂತಿ ಫೆಸ್ತ್ ದಿನವೇ ಇಹಲೋಕ ತ್ಯಜಿಸಿದ್ದಾರೆ. ಮಂಗಳೂರಿನ ಚರ್ಚನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.