

ಶಿರಹಟ್ಟಿ: ಮನುಷ್ಯನ ಹುಟ್ಟು, ಸಾವಿನ ಮಧ್ಯದ ಬದುಕು ಮುಖ್ಯವಾಗಿದ್ದು, ನಾವು ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಕ್ಕಿಂತ ಹೇಗೆ ಬದುಕಿದ್ದೇವೆ ಎನ್ನುವುದು ಮುಖ್ಯ. ಇಬ್ಬರು ಶತಾಯುಷಿಗಳನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಶ್ಲಾಘನೀಯ ಎಂದು ತಹಸೀಲ್ದಾರ್ ಅನಿಲ ಬಡಿಗೇರ ಹೇಳಿದರು.
ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಇತ್ತೀಚಿಗೆ ದೇವಿಹಾಳ ಗ್ರಾಮದ 103 ವರ್ಷದ ದುಗ್ಗಪ್ಪ ವೇಷಗಾರ, ಕೊಕ್ಕರಗುಂದಿ ಗ್ರಾಮದ ಜನ್ನತಬೀ ನದಾಫ 104 ವರ್ಷದ ಶತಾಯುಷಿಗಳ ಮನೆಗೆ ತೆರಳಿ ಅಭಿನಂದನಾ ಪತ್ರ ನೀಡಿ ಗೌರವಿಸಿ ಅವರು ಮಾತನಾಡಿದರು.
ತಾಪಂ ಇಒ ಡಾ. ಎನ್.ಎಚ್. ಓಲೇಕಾರ ಮಾತನಾಡಿ, ನೂರು ವರ್ಷಗಳ ಕಾಲ ಬಾಳಿ ಕುಟುಂಬಕ್ಕೆ ಕಳಶಪ್ರಾಯರಾಗಿರುವ ಶತಾಯುಷಿ ಪಾಲಕರನ್ನು ಪ್ರೀತಿ, ವಾತ್ಸಲ್ಯದಿಂದ ಕಾಣುವ ಮೂಲಕ ಅವರ ಆಶೀರ್ವಾದ ಪಡೆಯುವುದು ಮಕ್ಕಳ ಜವಾಬ್ದಾರಿಯಾಗಿದೆ ಎಂದರು.
ಕಂದಾಯ ನಿರೀಕ್ಷಕ ಪಿ.ಬಿ. ಗೋರೇಖಾನ, ರಾಧಾ ದೇಸಾಯಿಪಟ್ಟಿ, ಲಕ್ಷ್ಮಣ ಲಮಾಣಿ ಹಾಗೂ ಕುಟುಂಬಸ್ಥರು, ಗ್ರಾಮದ ಪ್ರಮುಖರಿದ್ದರು.