ಕಂಪ್ಲಿ: ತಾಲೂಕಿನಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಭರದಿಂದ ಸಾಗುತ್ತಿದ್ದು, ಶೇ.75 ಪೂರ್ಣಗೊಂಡಿದೆ. ಗಣತಿದಾರರು ಸಮೀಕ್ಷೆಗೆ ಮನೆ ಸಿಗದೆ ಪರದಾಡುತ್ತಿದ್ದು, ಮನೆ ಮನೆ ಹುಡುಕಿಕೊಂಡು ತಿರುಗುವಂತಾಗಿದೆ.
ಇದನ್ನೂ ಓದಿ:ಜಿಲ್ಲೆಯಲ್ಲಿ ಶೇ.70ರಷ್ಟು ಸಮೀಕ್ಷೆ ಪೂರ್ಣ
ಗಣತಿದಾರ ಯಾವುದೇ ಮನೆಯನ್ನು ಸಮೀಕ್ಷೆ ಮಾಡಬಹುದಾಗಿದ್ದು, ದೊರೆತ ಮನೆಗಳನ್ನೇ ಸಮೀಕ್ಷೆ ಮಾಡಿದ್ದರಿಂದ ಈಗಾಗಲೇ ಹಂಚಿಕೆಯಾಗಿದ್ದ ಪ್ರದೇಶದ ಗಣತಿದಾರರಿಗೆ ನಿರ್ದಿಷ್ಟ ಮನೆಗಳು ಸಿಗದಂತಾಗಿವೆ. ಒಬ್ಬ ಗಣತಿದಾರನ 72ರಲ್ಲಿ 60 ಮನೆಗಳನ್ನು ಬೇರೆ ಗಣತಿದಾರರು ಸಮೀಕ್ಷೆ ಮಾಡಿ ನೋಂದಣಿ ಮಾಡಿದ್ದಾರೆ. ಆದ್ದರಿಂದ ತನ್ನ ಪಾಲಿನ ಮನೆಗಳನ್ನು ಬೇರೆಡೆ ಹುಡುಕುವ ಪರಿಸ್ಥಿತಿ ಎದುರಾಗಿದೆ ಎಂದು ಹೆಸರೇಳಲಿಚ್ಚಿಸದ ಗಣತಿದಾರ ಅಲವೊತ್ತಿಕೊಳ್ಳುತ್ತಿದ್ದಾರೆ.
ಖಾಲಿ ಮನೆಗಳ ವಿದ್ಯುತ್ ಮೀಟರ್‌ಗೂ ಯುಎಚ್‌ಐಡಿ ನಂಬರ್ ಅಂಟಿಸಿದ್ದರಿಂದ ಯುಚ್‌ಐಡಿಗಳ ಸಂಖ್ಯೆ ಹೆಚ್ಚಿದ್ದು, ವಾಸವಿರುವ ಕುಟುಂಬಗಳ ಸಂಖ್ಯೆ ಕಡಿಮೆ ಆಗಿದ್ದರಿಂದ ಗಣತಿಗೆ ನಿಖರ ಸಂಖ್ಯೆ ಸಿಗುವುದು ಕಷ್ಟವಾಗಿದೆ. ಶನಿವಾರ ಮಧ್ಯಾಹ್ನದೊತ್ತಿಗೆ ತಾಲೂಕಿನಲ್ಲಿ ಶೇ.75 ಸಮೀಕ್ಷೆ ಪೂರ್ಣಗೊಂಡಿದೆ. ಕಂಪ್ಲಿ ಪಟ್ಟಣದಲ್ಲಿ ಜೆಸ್ಕಾಂ ಪ್ರಕಾರ 14 ಸಾವಿರ ಮೀಟರ್‌ಗಳಿವೆ. ಪುರಸಭೆ ಆಸ್ತಿ ಸಂಖ್ಯೆ ಪ್ರಕಾರ 9000ಕ್ಕೂ ಹೆಚ್ಚಿವೆ. ಸದ್ಯ 8,886 ಮನೆಗಳ ಸಮೀಕ್ಷೆ ನೋಂದಣಿಯಾಗಿವೆ.
ಜೆಸ್ಕಾಂ ಮೀಟರ್ ಸಂಖ್ಯೆಗೂ ವಾಸವಿರುವ ಕುಟುಂಬಗಳಿಗೂ ಹೊಂದಾಣಿಕೆ ಆಗುತ್ತಿಲ್ಲ. ಯುಎಚ್‌ಐಡಿ ಸಂಖ್ಯೆ ಹೆಚ್ಚಿವೆ, ಮನೆಗಳ ಸಂಖ್ಯೆ ಕಡಿಮೆ ಇವೆ. ಸಮೀಕ್ಷೆಗೊಳಪಡದ ಮನೆಗಳ ಪಟ್ಟಿ ತಯಾರಿಸಿ ಗಣತಿದಾರರಿಗೆ ನೀಡುತ್ತಿದ್ದೇವೆ. ತಳವಾರ, ಪಿಡಿಒ, ವಿಎಒ, ಆರ್‌ಐ ಕ್ಷೇತ್ರಗಳಿಗೆ ಕಳುಹಿಸಿದ್ದು ಸಮೀಕ್ಷೆಗೊಳಪಡದ ಮನೆಗಳನ್ನು ಪತ್ತೆ ಮಾಡುತ್ತಿದ್ದಾರೆ ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ತಿಳಿಸಿದರು. ಸಮೀಕ್ಷೆ ಮಾಡಲು ಗಣತಿದಾರರು ಸಿದ್ಧರಿದ್ದಾರೆ. ಆದರೆ, ಮನೆಗಳು ದೊರಕುತ್ತಿಲ್ಲ. ಸಮೀಕ್ಷೆಗೊಳಪಡದ ಮನೆಗಳ ಪಟ್ಟಿ ತಯಾರಿಸಿ ಕೊಡುವಂತೆ ತಹಸೀಲ್ದಾರರನ್ನು ಕೋರಿದ್ದೇವೆಂದು ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ ಹೇಳಿದರು.