

ಚಿಕ್ಕಬಳ್ಳಾಪುರ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿನ ತಾಂತ್ರಿಕ ಲೋಪಗಳನ್ನು ಖಂಡಿಸಿ, ಗಣತಿದಾರರು ಚಿಕ್ಕಬಳ್ಳಾಪುರ ನಗರದಲ್ಲಿನ ತಾಲೂಕು ಕಚೇರಿ ಎದುರು ಪ್ರತಿಭಟಿಸಿದರು.
ದೋಷಪೂರಿತ ತಾಂತ್ರಿಕತೆ ಸಮಸ್ಯೆಯು ಕೆಲಸದ ಪ್ರತಿ ಸಂದರ್ಭದಲ್ಲೂ ಉಂಟಾಗುತ್ತದೆ. ಶಿಕ್ಷಕರನ್ನು ಕರ್ತವ್ಯ ನಿರ್ವಹಿಸುವ ಮತ್ತು ವಾಸ ಇರುವ ಸ್ಥಳಗಳನ್ನು ಬಿಟ್ಟು ದೂರದ ಪ್ರದೇಶಗಳಲ್ಲಿ ನಿಯೋಜಿಸಿರುವುದದಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮನೆಗಳನ್ನು ಗುರುತಿಸುವಲ್ಲಿ ತೊಡಕಾಗುತ್ತಿದ್ದು, ಸಮಯ ವ್ಯರ್ಥವಾಗುತ್ತಿದೆ. ಯುಎಚ್‌ಐಡಿ ಮೂಲಕ ಮನೆಗಳನ್ನು ಗುರುತಿಸಲು ಅಸಾಧ್ಯವಾಗಿದ್ದು, ಜಿಯೋ ಟ್ಯಾಗ್ ಸರಿಯಾಗಿ ಮನೆಗಳ ಬಳಿಗೆ ನ್ಯಾವಿಗೇಟ್ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿಸಿದರು.
ಹಿಂದಿನ ಇತಿಹಾಸವನ್ನು ಆವಲೋಕಿಸಿದಾಗ ಗಣತಿಯಲ್ಲಿ ಚಿಕ್ಕಬಳ್ಳಾಪುರ ಮೊದಲ ಸ್ಥಾನದಲ್ಲಿತ್ತು. ಆದರೆ, ಈಗ ಹಲವು ಸಮಸ್ಯೆಗಳಿಂದ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಈ ಹಿಂದೆ ಬಿಎಲ್‌ಒಗಳನ್ನು ಬಳಸಿಕೊಳ್ಳುತ್ತಿದ್ದರಿಂದ ಗಣತಿ ಪ್ರಕ್ರಿಯೆ ಸಲಭವಾಗಿತ್ತು. ಇವರ ಕಾರ್ಯ ನಿರ್ವಹಣೆಯಿಂದ ಹೆಚ್ಚಿನ ಮಾಹಿತಿ ಸಿಗುತ್ತಿತ್ತು. ಆದರೆ, ಹೊಸ ಶಿಕ್ಷಕರು ಗೊಂದಲ ಅನುಭವಿಸುವಂತಾಗಿದೆ. ಕೆಲವರಿಗೆ ಆಪ್ ಓಪೆನ್ ಮಾಡೋದೇ ಗೊತ್ತಿಲ್ಲ ಎಂದುರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಮಂಡಳಿ ಸದಸ್ಯ ಕೆ.ಸಿ.ಶ್ರೀನಿವಾಸ್ ಕಿಡಿಕಾರಿದರು.
ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಸರ್ಮಪಕವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಶಿಕ್ಷಕಿ ಪ್ರೇಮಾವತಿ ಅಳಲು ತೋಡಿಕೊಂಡರು.
ಪ್ರತಿಭಟನೆಯಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ರಾಜ್ಯ ಜಂಟಿ ಕಾರ್ಯದರ್ಶಿ ಸುನೀಲ್, ಪ್ರಚಾರ ಸಮಿತಿ ಸದಸ್ಯ ವಿಷ್ಣುವರ್ಧನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಜೇಂದ್ರ ಬಾಬು ಮತ್ತಿತರರು ಭಾಗವಹಿಸಿದ್ದರು.