

ಮಂಡ್ಯ: ಜಿಲ್ಲೆಯಲ್ಲಿ ಜು.10 ರಿಂದ ಸಣ್ಣ ನೀರಾವರಿ ಹಾಗೂ ನೀರಿನಾಸರೆಗಳ ಗಣತಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ನೀರಿನಾಸರೆಗಳ ಗಣತಿಯನ್ನು ಮೊಬೈಲ್ ಆ್ಯಪ್ ಮೂಲಕ ನಿರ್ವಹಿಸಲಿದ್ದು, ಗ್ರಾಮ ಆಡಳಿತಾಧಿಕಾರಿಗಳು ಗಣತಿದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಗಣತಿದಾರರು ತಮ್ಮ ವ್ಯಾಪ್ತಿಯಲ್ಲಿ ಬರುವ ಬಾವಿ, ಕೆರೆ ಕಟ್ಟೆ, ಕೃಷಿ ಹೊಂಡ, ಚೆಕ್ ಡ್ಯಾಂ, ಅಚ್ಚುಕಟ್ಟು ಪ್ರದೇಶ ಹಾಗೂ ಇನ್ನಿತರೆ ನೀರಾವರಿ ಪ್ರದೇಶಗಳ ಗಣತಿ ಮಾಡಬೇಕಿರುತ್ತದೆ. ಗಣತಿಯಲ್ಲಿ ವಿವರವನ್ನು ಭರ್ತಿ ಮಾಡಲು ಅಗತ್ಯ ತರಬೇತಿ ನೀಡಬೇಕು. ಗಣತಿ ಸಂದರ್ಭದಲ್ಲಿ ಕೆಪಿಟಿಸಿಎಲ್ನಿಂದ ವಿದ್ಯುತ್ ಸಂಪರ್ಕ ಪಡೆದಿರುವ ಬೋರ್‌ವೆಲ್ಗಳ ಸಂಖ್ಯೆ, ಮೀನುಗಾರಿಕೆ ಇಲಾಖೆಯಿಂದ ಮೀನು ಪಾಲನೆ ಮಾಡುತ್ತಿರುವ ಹೊಂಡ ಹಾಗೂ ಕೆರೆಗಳ ಮಾಹಿತಿ ಪಡೆದುಕೊಳ್ಳಬಹುದು. ಈ ಹಿನ್ನಲೆಯಲ್ಲಿ ಗಣತಿ ಕಾರ್ಯದಲ್ಲಿ ಇಲಾಖೆಗಳ ಸಮನ್ವಯ ಅತಿ ಮುಖ್ಯ ಎಂದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯಾವುದೇ ನೀರಿನಾಸೆರೆಗಳು ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಿ. ಗಣತಿಯಲ್ಲಿ ನೀರಿನಾಸೆರೆಗಳಿಗೆ ಸಂಬಂಧಿಸಿದಂತೆ ಕೇಳಿರುವ ಮಾಹಿತಿಗಳನ್ನು ನಿಖರವಾಗಿ ಭರ್ತಿ ಮಾಡಿ. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪ್ರಾಥಮಿಕ ಕಾರ್ಯಕರ್ತರಿಗೆ ತಾಲೂಕು ಮಟ್ಟದಲ್ಲಿ ತರಬೇತಿ ನೀಡಬೇಕು. ಗಣತಿ ಕಾರ್ಯ ಮುಕ್ತಾಯವಾಗುವವರೆಗೂ ಕ್ಷೇತ್ರ ಕಾರ್ಯದ ಮೇಲ್ವಿಚಾರಣೆ ಹಾಗೂ ಕಾಲಕಾಲಕ್ಕೆ ಪ್ರಗತಿ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಶಂಕರ್ ಇತರರಿದ್ದರು.