

ಮೈಸೂರು: ಜಾತಿ ಜನಗಣತಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಲಾ ಗುವುದು ಎಂದು ವಿಧಾನ ಪರಿಷತ್ ಸದಸ್ಯ ಡಿ.ತಿಮ್ಮಯ್ಯ ಹೇಳಿದರು.
ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಗುರುವಾರ ಜನಗಣತಿ ವರದಿ ಕುರಿತು ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರು, ದಲಿತರು ಹಾಗೂ ಅಲ್ಪಸಂಖ್ಯಾತರ ಪರವಾಗಿ ಇದ್ದು, ವರದಿ ಜಾರಿಗೆ ಅವರ ಮೇಲೆ ಒತ್ತಡ ಹೇರೋಣ. ಇಂತಹ ಅವಕಾಶ ಮತ್ತೆ ಸಿಗೋದಿಲ್ಲ ಎಂದು ಹೇಳಿದರು.
ದೇಶದಲ್ಲಿ ಜಾತಿ ವ್ಯವಸ್ಥೆ ರಕ್ತಗತವಾಗಿದೆ. ಜಾತಿ ವ್ಯವಸ್ಥೆಯಿಂದ ಹಲವಾರು ಸಮುದಾಯಗಳು ಅವಕಾಶ ವಂಚಿತರಾಗಿ ಹಿಂದುಳಿದಿ ದ್ದಾರೆ. ಹೀಗಾಗಿ ಪ್ರತಿಯೊಂದು ಸಮುದಾಯಗಳ ಸ್ಥಿತಿಗತಿ ಅರಿತು ಅವರಿಗೆ ಸಾಮಾಜಿಕ ನ್ಯಾಯ ನೀಡಲು ವರದಿ ಜಾರಿಯ ಅವಶ್ಯಕತೆ ಇದೆ. ಹಿಂದುಳಿದ ವರ್ಗಗಳಿಗೆ ಶಕ್ತಿ ತಂದು ಕೊಟ್ಟವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು. ಉಳುವವನೇ ಭೂಮಿ ಒಡೆಯದಂತ ಐತಿಹಾಸಿಕ ತೀರ್ಮಾನ ಕೈಗೊಂಡು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದರು. ಇದೇ ಮಾದರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಯುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆೆ.ಎಸ್.ಶಿವರಾಮ್ ಮಾತನಾಡಿ, ಪ್ರಸ್ತುತ ರಾಜ್ಯದಲ್ಲಿ ದಲಿತ, ಹಿಂದುಳಿದ ವರ್ಗ ಮತ್ತು ಸೂಕ್ಷ್ಮ ಜಾತಿಗಳ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ ಹದಗೆಟ್ಟಿದೆ. ಜಾತಿಗಣತಿ ಮಾಡಿದರೆ ಜಾತಿ-ಜಾತಿಗೆ ವೈರತ್ವ ಬೆಳೆಯಲಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಹಾಸ್ಯಸ್ಪದವಾಗಿದೆ. ಈ ಜನಗಣತಿ ಜಾರಿಯಾದರೆ ಎಲ್ಲ ಸಮುದಾಯಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿಯಾಗಲಿದೆ. ಹೀಗಾಗಿ ವರದಿ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಕಾಳೇಗೌಡ ನಾಗವಾರ, ಪ್ರೊ.ಕಾಳಚನ್ನೇಗೌಡ, ಉಪ್ಪಾರ ಸಮುದಾಯದ ಯೋಗೇಶ್ ಉಪ್ಪಾರ್, ಮಡಿವಾಳ ಸಮಾಜದ ರವಿನಂದನ್, ಕುಂಬಾರ ಸಮುದಾಯದ ಪ್ರಕಾಶ್, ಅಲ್ಪ ಸಂಖ್ಯಾತ ಮುಖಂಡ ಖಲೀಂ, ಸವಿತಾ ಸಮಾಜದ ಮಂಜುನಾಥ್, ಕಾಂಗ್ರೆಸ್ ನಗರ ವಕ್ತಾರ ರಾಜೇಶ್ ಹಾಗೂ ಇತರರು ಇದ್ದರು.