

ಕಿಕ್ಕೇರಿ: ಪ್ರತಿ ಗ್ರಾಮದಲ್ಲಿ ಸ್ಮಶಾನ ಅವಶ್ಯವಿದ್ದು, ಇರುವ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಳ್ಳದಂತೆ ಅಧಿಕಾರಿಗಳು ಗಮನಹರಿಸಭೇಕು ಎಂದು ಶಾಸಕ ಎಚ್.ಟಿ.ಮಂಜು ಸೂಚನೆ ನೀಡಿದರು.
ಹೋಬಳಿಯ ಮಾದಾಪುರ ಗ್ರಾಮದ ಗ್ರಾಪಂನಲ್ಲಿ ಸೋಮವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಈ ಸಭೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಾಗಿದೆ. ಕನಿಷ್ಠ ವರ್ಷಕ್ಕೆ 3 ಬಾರಿಯಾದರೂ ಸಭೆ ನಡೆಯಬೇಕು. ಸಭೆಯಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸಿ ಸಮಸ್ಯೆ ಪರಿಹರಿಸುವ ಕೆಲಸವಾಗಬೇಕು. ಸಭೆ ಶೋಕಿಗಾಗಿ ನಡೆಯುವುದಲ್ಲ ಎಂಬ ಗಮನವಿರಲಿ ಎಂದು ಎಚ್ಚರಿಸಿದರು.
ಜನರ ಸುರಕ್ಷತೆಗಾಗಿ ಪೊಲೀಸರ ಬೀಟ್ ಹೆಚ್ಚಿಸಬೇಕು. ನಿವೇಶನರಹಿತರಿಗೆ ನಿವೇಶನ ನೀಡಲು ಜಾಗ ಗುರ್ತಿಸಬೇಕು. ಇ-ಸ್ವತ್ತಿಗೆ ಸತಾಯಿಸಬಾರದು. ಪ್ರಧಾನಮಂತ್ರಿ ಅವರ ಆಶಯದ ರೈತರಿಗೆ ವಿದ್ಯುತ್ ಸೌಲಭ್ಯಕ್ಕೆ ಸೌರ ವಿದ್ಯುತ್ ಘಟಕ ಸ್ಥಾಪನೆಗೆ 5 ಎಕರೆ ಸರ್ಕಾರಿ ಜಾಗವನ್ನು ಗುರ್ತಿಸಲು ಮುಂದಾಗಿ ಎಂದು ನಿರ್ದೇಶನ ನೀಡಿದರು.
ಮಾದಾಪುರ ಕೊಪ್ಪಲು ಗ್ರಾಮದಲ್ಲಿರುವ ಶಿಕ್ಷರ ವಸತಿ ಕಟ್ಟಡ ಸಾಕಷ್ಟು ವರ್ಷಗಳಿಂದ ಪಾಳು ಬಿದ್ದಿದೆ. ಅನೈತಿಕ ಚಟುವಟಿಕೆ ತಾಣವಾಗಿದೆ. ಲಕ್ಷಾಂತರ ರೂ.ಗಳಿಂದ ನಿರ್ಮಿಸಿರುವ ಈ ಕಟ್ಟಡದಲ್ಲಿ ಶಿಕ್ಷಕರಿಗೆ ವಾಸವಾಗಿಲ್ಲ. ಬಿಸಿಎಂ ಹಾಸ್ಟೆಲ್ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಈ ಹಾಸ್ಟಲ್ ಅನ್ನು ಶಿಕ್ಷರ ವಸತಿ ಕಟ್ಟಡಕ್ಕೆ ಸ್ಥಳಾಂತರಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು.
ತಾಪಂ ಇಒ ಸುಷ್ಮಾ, ಗ್ರಾಪಂ ಅಧ್ಯಕ್ಷ ಕೃಷ್ಣೇಗೌಡ, ಪಿಡಿಒ ಬಿ.ಪಿ. ಚಂದ್ರು, ತಾಲೂಕು ಯೋಜನಾಧಿಕಾರಿ ಶ್ರೀನಿವಾಸ್, ಗ್ರಾಪಂ ಸದಸ್ಯ, ಸ್ವಸಹಾಯ ಸಂಘ ಮಹಿಳೆಯರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.