

ಬೀರೂರು: ಗಾಳಿಹಳ್ಳಿ ಸಮೀಪದ ವೀರಶೈವ ಲಿಂಗಾಯತ ರುದ್ರಭೂಮಿ ವಿಶಾಲ ಭೂ ಪ್ರದೇಶ ಹೊಂದಿದ್ದು ತಡೆಗೋಡೆ ಸಹಿತ ಮೂಲ ಸೌಕರ್ಯ ಅಭಿವೃದ್ಧಿಗೆ ವೀರಶೈವ ಲಿಂಗಾಯತ ಸಮಾಜ ಮುದಾಗಬೇಕು ಎಂದು ಬೀರೂರು ರಂಭಾಪುರಿ ಖಾಸಾಶಾಖಾ ಪೀಠದ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಪತ್ರೆ ಕೆ.ಚನ್ನವೀರಪ್ಪಯ್ಯ ಕಲ್ಯಾಣ ಮಂದಿರದಲ್ಲಿ ವೀರಶೃವ ಲಿಂಗಾಯತ ಸಮಾಜ ಆಯೋಜಿಸಿದ್ದ ರುದ್ರಭೂಮಿ ಅಭಿವೃದ್ಧಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬದುಕಿದ್ದಾಗ ಗೌರವ ನೀಡುವ ನಾವು ಸತ್ತಾಗ ತಾತ್ಸಾರ ಮನೋಭಾವದಿಂದ ನೋಡುವುದು ನಮ್ಮ ಸಂಸ್ಕೃತಿಯಲ್ಲ. ನಮ್ಮ ಹಿರಿಯರು ನಮಗೆ ಹುಟ್ಟಿನಿಂದ ಸಾವಿನವರಗಿನ ಬದುಕಿನ ಜೀವನ ಪದ್ಧತಿಯ ಸಂಸ್ಕಾರಗಳನ್ನು ಭಿತ್ತಿ ಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಮ್ಮ ಪರಾಂಪರಾಗತ ಅಂತ್ಯಕ್ರಿಯೆಯ ಶವಸಂಸ್ಕಾರ ಪದ್ದತಿಯನ್ನು ಬಿಟ್ಟು ತರಾತುರಿಯಲ್ಲಿ ಅಂತಿಮ ಸಂಸ್ಕಾರ ನಡೆಸುತ್ತಿರುವುದು ವಿಷಾದನೀಯ ಎಂದರು.
ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಮಾತನಾಡಿ, ಮೊದಲ ಹಂತದಲ್ಲಿ ಅಭಿವೃದ್ಧಿ ಸಮಿತಿ ರಚನೆಯಾಗಬೇಕು. ಅಭಿವೃದ್ಧಿಗೊಂಡಿರುವ ನಾಲ್ಕಾರು ರುದ್ರಭೂಮಿಯನ್ನು ನೋಡಿ ಅಭಿವೃದ್ಧಿ ವೆಚ್ಚಗಳ ನೀಲನಕ್ಷೆ ತಯಾರಿಸಿ ವಾಸ್ತು ಪ್ರಕಾರವಾಗಿ ರುದ್ರಭೂಮಿ ಅಭಿವೃದ್ಧಿಗೆ ಕ್ರಮವಹಿಸಲಾಗುವುದು. ಇದಕ್ಕಾಗಿ ಮತ್ತೊಮ್ಮೆ ಸಭೆ ಕರೆದು ಕ್ರಿಯಾ ಯೋಜನೆಗೆ ಚಾಲನೆ ನೀಡಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಪುರಸಭೆ ಮಾಜಿ ಸದಸ್ಯ ಮಾರ್ಗದ ಮಧು, ಪುರಸಭೆ ಸದಸ್ಯ ಟಿ.ಆರ್.ರಘು, ಕೆ.ಹೆಚ್,ಜಗದೀಶ್, ಎಂ.ಆರ್.ಮರುಳಸಿದ್ದಾರಾಧ್ಯ, ವಕೀಲೆ ನಿರ್ಮಲಾ, ಸಮಾಜದ ಜಯಣ್ಣ, ಶಿವಕುಮಾರ್, ಸಂಪತ್ ಕುಮಾರ್ ಇದ್ದರು.