

ಬೈಲಹೊಂಗಲ: ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ರೈತರ, ಮಠಗಳ, ಶಾಲೆಗಳ, ಸ್ಮಶಾನ ಭೂಮಿಗಳ ಆಸ್ತಿಗಳ ಪಹಣಿಯಲ್ಲಿ ಕಂಡು ಬರುತ್ತಿರುವ ವಕ್ಫ್ ಹಕ್ಕು ದಾಖಲಾತಿ ವಿಷಯ ಬೈಲಹೊಂಗಲಕ್ಕೂ ವಕ್ಕರಿಸಿದೆ. ತಾಲೂಕಿನ ಸಂಗೊಳ್ಳಿ ಗ್ರಾಮದ ಸ್ಮಶಾನ ಭೂಮಿ ಉತಾರದಲ್ಲೂ ವಕ್ಫ್ ಎಂದು ನಮೂದಾಗಿದೆ. ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದ ಗ್ರಾಪಂ ಆಸ್ತಿಯನ್ನು ಸಾರ್ವಜನಿಕವಾಗಿ ಸ್ಮಶಾನಕ್ಕೆ ಹಸ್ತಾಂತರಿಸಿದ ಮಸಣಮಠ ಎಂಬ ಹೆಸರಿನ 128 ಸರ್ವೇ ನಂಬರ್ 8 ಎಕರೆ 27 ಗುಂಟೆ ಆಸ್ತಿಯ ಹೆಸರಿನಲ್ಲಿದ್ದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಹಕ್ಕು ದಾಖಲಾತಿಯ ಕಾಲಂನಲ್ಲಿ ನಮೋದು ಆಗಿದೆ. 7.11.2024 ರಂದು ಗ್ರಾಮದ ನಾಗರಿಕರೋರ್ವರು ಉತಾರ ತೆೆಗೆಸಿ ನೋಡಿದಾಗ ಈ ಮಾಹಿತಿ ಬಹಿರಂಗವಾಗಿದೆ.
ಈ ಕುರಿತು ತಹಶೀಲ್ದಾರ್ ಹಣಮಂತ ಶಿರಹಟ್ಟಿ ಅವರನ್ನು ಸಂಪರ್ಕಿಸಲಾಗಿ ಗೆಜೆಟ್‌ನಲ್ಲಿ ಈ ರೀತಿ ಆಗಿರಬಹುದು. ಇಲ್ಲಿಯವರೆಗೆ ನಮ್ಮ ಕಚೇರಿಯಿಂದ ಯಾವುದೇ ನೋಟಿಸ್ ನೀಡಿ ವಕ್ಫ್ ಆಸ್ತಿ ಎಂದು ದಾಖಲಾತಿ ಮಾಡಿಲ್ಲ ಎಂದರು. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಗ್ರಾಪಂ ಸದಸ್ಯ ಬಸವರಾಜ ಕೊಡ್ಲಿ, ನ್ಯಾಯವಾದಿ ಉಮೇಶ ಲಾಳ, ಕೂಡಲೇ ಸ್ಮಶಾನ ಭೂಮಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ನಮೋದು ಮಾಡಿದ್ದನ್ನು ಕೈಬಿಡಬೇಕು. ಇಲ್ಲದಿದ್ದರೆ ಗ್ರಾಮಸ್ಥರು ಸೇರಿ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯಾದ್ಯಂತ ರೈತರ ನೆಮ್ಮದಿ ಹಾಳು ಮಾಡಿರುವ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು ದಾಖಲಾತಿಗಳ ವಿರುದ್ಧ ನ.11 ರಂದು ಬೆಳಗ್ಗೆ 10ಕ್ಕೆ ಸಂಗೊಳ್ಳಿ ರಾಯಣ್ಣ ವತ್ತದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರತಿಭಟನೆ ಯಶಸ್ವಿಗೊಳಿಸಬೇಕು. ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದ ಸ್ಮಶಾನ ಭೂಮಿ ಕಬಳಿಸಲು ಯತ್ನಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಹೋರಾಟ ಮಾಡಲಾಗುವುದು. | ಡಾ.ವಿಶ್ವನಾಥ ಪಾಟೀಲ ಮಾಜಿ ಶಾಸಕ