

ರಾಯಚೂರು: ಸ್ಮಶಾನ, ಖಬರಸ್ತಾನಗಳನ್ನು ಸ್ವಚ್ಛಗೊಳಿಸುವ ಮೂಲಕ ಸಮಾಜಮುಖಿ ಮತ್ತು ಮೂಢನಂಬಿಕೆ ತೊಲಗಿಸುವ ಉತ್ತಮ ಕಾರ್ಯಕ್ಕೆ ಕೈಜೋಡಿಸಿದ ಮನಸುಗಳ ಸೇವೆ ಶ್ಲಾಘನೀಯ ಎಂದು ಎಸ್ಪಿ ಡಾ. ಸಿ.ಬಿ.ವೇದಮೂರ್ತಿ ಹೇಳಿದರು.
ನಗರದ ಶಂಶಾಲಂ ದರ್ಗಾದ ಮುಂದಿರುವ ಖಬರಸ್ತಾನದಲ್ಲಿ ಡಾ. ಶ್ರೀ ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದಿಂದ ಹಮ್ಮಿಕೊಂಡ ಸ್ಮಶಾನಗಳ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ನಗರದಲ್ಲಿರುವ ವಿವಿಧ ಸ್ಮಶಾನಗಳ ಸ್ವಚ್ಛತಾ ಕಾರ್ಯಕ್ಕೆ ಪ್ರತಿಷ್ಠಾನ ಕೈಜೋಡಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಪಂಡರಿಪುರ, ಕೊಲ್ಲಾಪುರ, ಬಾಗಲಕೋಟ, ಕಲಬುರಗಿ, ಬೀದರ್, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸ್ವಚ್ಚತಾ ಅಭಿಯಾನ ನಡೆಸಿದ ಸದಸ್ಯರು ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ನಗರದಲ್ಲಿನ ವಿವಿಧ ಸಮುದಾಯಗಳ ರುದ್ರಭೂಮಿಯಲ್ಲಿ ಸ್ವಚ್ಚತಾ ಅಭಿಯಾನದಲ್ಲಿ ಹಲವರು ಪಾಲ್ಗೊಂಡು ಕೈ ಜೋಡಿಸಿದರು. ಪ್ರತಿಷ್ಠಾನದ ಸಂಚಾಲಕ ವಿಜಯ ಲಕ್ಕುಂಡಿ, ಡೊಂಕಾಲಪ್ಪ, ಕಾಶಿನಾಥ್, ನಿತಿನ್, ವಿಜಯ್ ಸೇರಿ ಇತರರಿದ್ದರು.