

ಜಗಳೂರು: ಪಟ್ಟಣ ಪಂಚಾಯಿತಿಯ ನಗರೋತ್ಥಾನ ಯೋಜನೆಯಡಿ ನಿರ್ಮಾಣಗೊಂಡಿದ್ದ ಸಿಮೆಂಟ್ ರಸ್ತೆಗಳನ್ನು ಗುರುವಾರ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರೋತ್ಥಾನ ಹಂತ 4ರ ಯೋಜನೆಯಡಿ ಸುಮಾರು 4.25 ಕೋಟಿ ರೂ. ವೆಚ್ಚದಲ್ಲಿ ರಸ್ತೆಯ ಡಿವೈಡರ್ ಲೈಟಿಂಗ್ ಹಾಗೂ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳು ಮುಕ್ತಾಯವಾಗಿದ್ದು, ಅವುಗಳ ಗುಣಮಟ್ಟ ಪರಿಶೀಲಿಸಿ, ರಸ್ತೆಗೆ ಹಾಕಲಾದ ಸಿಮೆಂಟ್ ಪ್ರಮಾಣ, ಎತ್ತರ, ಗುಣಮಟ್ಟದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ವಿದ್ಯಾನಗರದ ಕೆನರಾ ಬ್ಯಾಂಕ್ ಪಕ್ಕದಲ್ಲಿ ಪೂರ್ಣಗೊಂಡಿದ್ದ ಸಿಸಿ ರಸ್ತೆ, ಕೃಷ್ಣ ಬಡಾವಣೆಯ ಸಿಸಿ ರಸ್ತೆಗಳನ್ನು ಟೇಪ್‌ನಿಂದ ಅಳತೆ ಮಾಡಿಸಿದರು. ಇನ್ನು, ಕೆನರಾ ಬ್ಯಾಂಕ್, 16ನೇ ವಾರ್ಡ್, 3, 2,17, 12 ವಾರ್ಡ್‌ಗಳಲ್ಲಿ ಕಾಮಗಾರಿಗಳ ದಾಖಲೆ ಮತ್ತು ಪೋಟೋ ಪರಿಶೀಲಿಸಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿ, ಜಿಲ್ಲೆಯಲ್ಲಿ ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಲಾಗುತ್ತಿದೆ. ಜಗಳೂರಿನಲ್ಲೂ ರಸ್ತೆ ಪರಿಶೀಲಿಸಲಾಗಿದೆ. ಅಂದಾಜು ಪಟ್ಟಿಯ ಪ್ರಕಾರ ಕೆಲಸ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಿಸಿ ರಸ್ತೆ, ಡಾಂಬರೀಕರಣ, ಚರಂಡಿ ಸೇರಿದಂತೆ ಯಾವುದೆ ಕಾಮಗಾರಿಗಳು ಕಳಪೆಯಿಂದ ಕೂಡಿರದೇ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶ ಎಂದರು.
ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಎನ್. ಮಹಾಂತೇಶ್, ಇಇ ಮಂಜುನಾಥ್, ತಹಸೀಲ್ದಾರ್ ಅರುಣ್ ಕಾರಗಿ, ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಇಂಜಿನಿಯರ್ ಎಚ್.ಕೆ. ಶೃತಿ, ಆರೋಗ್ಯ ನಿರೀಕ್ಷಕ ಕಿಫಾಯಿತ್, ಗುತ್ತಿಗೆದಾರ ಜಿಲಾನಿ, ಮುಖಂಡರಾದ ಓಬಳೇಶ್, ಗಂಗಾಧರ್, ಶಿವರಾಜ್ ಮತ್ತಿತರರಿದ್ದರು.