ಸಂಭ್ರಮದ ಬಕ್ರೀದ್ ಹಬ್ಬ, ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆ

13cmy5
Published on

ಚಿಕ್ಕಬಳ್ಳಾಪುರ: ಬಕ್ರೀದ್ ಹಬ್ಬವನ್ನು ಅರ್ಥಪೂರ್ಣವಾಗಿ ಸಂಭ್ರಮದಿಂದ ಆಚರಿಸಲು ಮುಸ್ಲಿಂ ಬಾಂಧವರು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದಾರೆ. ಇದರ ನಡುವೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಿರಲು ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ.

ಜೂ.17 ರಂದು ಬಕ್ರೀದ್ ಹಬ್ಬ. ಸಾಮೂಹಿಕ ಪ್ರಾರ್ಥನೆ, ಅತಿಥಿ ಸತ್ಕಾರದ ಇಫ್ತಿಯಾರ್ ಕೂಟ ಸೇರಿದಂತೆ ಧಾರ್ಮಿಕ ವಿವಿಧ ಸೇವಾ ಚಟುವಟಿಕೆಯ ಮೂಲಕ ಭಗವಂತನನ್ನು ಪ್ರಾರ್ಥಿಸಲಾಗುತ್ತದೆ. ಇದರ ನಡುವೆ ಪೊಲೀಸ್ ಠಾಣೆಗಳಲ್ಲಿ ವಿವಿಧ ಸಮುದಾಯಗಳ ಮುಖಂಡರ ಸಭೆಯನ್ನು ನಡೆಸಿ, ಹಬ್ಬದ ವೇಳೆ ಯಾವುದೇ ಅವಘಡಗಳಿಗೆ ಅವಕಾಶ ನೀಡದೇ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ.

ಇಸ್ಲಾಂ ಧರ್ಮದ ಪದ್ಧತಿಯಂತೆ ಬಕ್ರೀದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು. ಯಾವುದೇ ಅಹಿತಕರ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು. ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಯಾವುದೇ ಧರ್ಮದ ಹಬ್ಬ ಹರಿದಿನವಾಗಲಿ, ಮತ್ತೊಂದು ಧರ್ಮದವರಿಗೆ ತೊಡಕು ಉಂಟಾಗದ ರೀತಿಯಲ್ಲಿ ಆಚರಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಯಿತು.

ಚಿಂತಾಮಣಿ ನಗರದ ಹೃದಯ ಭಾಗದಲ್ಲಿರುವ ಜಾಮೀಯಾ ಮಸೀದಿಯಿಂದ ಬೆಳಿಗ್ಗೆ 9 ಕ್ಕೆ ಮೆರವಣಿಗೆ ಮೂಲಕ ಬಾಗೇಪಲ್ಲಿ ವೃತ್ತದಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಲಾಗುತ್ತದೆ. ಅಲ್ಲಿ ನಮಾಜ್ ಮಾಡಲಾಗುತ್ತದೆ. ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಚಿಂತಾಮಣಿಯ ಜಾಮೀಯಾ ಮಸೀದಿ ಅಧ್ಯಕ್ಷ ಮೂನ್ ಸ್ಟಾರ್ ಗೌಸ್ ಪಾಷಾ ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net