ದೇಶಾಭಿವೃದ್ಧಿಯ ಹರಿಕಾರ ಪ್ರಧಾನಿ ಮೋದಿ...

BJP
Published on

ಜಿಲ್ಲಾಧ್ಯಕ್ಷ ಕಿಶೋರಕುಮಾರ್​ ಕುಂದಾಪುರ ಹೆಮ್ಮೆ

ಕೇಂದ್ರ ಸರ್ಕಾರಕ್ಕೆ 11 ವರ್ಷದ ಹಿನ್ನೆಲೆಯಲ್ಲಿ ಸಂಭ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಜಗತ್ತಿನಲ್ಲಿ ಪ್ರಸ್ತುತ ಭಾರತವು ನಾಲ್ಕನೇ ಆರ್ಥಿಕ ರಾಷ್ಟ್ರವಾಗಿದ್ದು ಪ್ರಥಮ ಸ್ಥಾನಕ್ಕೆ ಏರಬೇಕೆನ್ನುವುದು ದೇಶದ ಜನರು ಹಾಗೂ ಬಿಜೆಪಿಯ ಆಶಯವಾಗಿದೆ. ದೇಶದಲ್ಲಿ ಅಭಿವೃದ್ಧಿಯ ಪರ್ವವೇ ಸಾಗುತ್ತಿದೆ. ಜವಾಹರ ಲಾಲ್​ ನೆಹರು ಬಳಿಕ ನಿರಂತರ ಮೂರು ಅವಧಿಗೆ ಪ್ರಧಾನಿಯಾಗಿ ಮುಂದುವರಿದ ನರೇಂದ್ರ ಮೋದಿ ಅವರು ಪಕ್ಷ ಸಂಘಟನೆಯೊಂದಿಗೆ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ನುಡಿದಂತೆ ನಡೆಯುತ್ತಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ್​ ಕುಂದಾಪುರ ಹೆಮ್ಮೆ ವ್ಯಕ್ತಪಡಿಸಿದರು.

ಉಡುಪಿಯ ಕಡಿಯಾಳಿಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜೂನ್​ 10ರಂದು ಆಯೋಜಿಸಿದ್ದ ವಿಕಸಿತ ಭಾರತದ ಅಮೃತ ಕಾಲ; ಸೇವೆ, ಸುಶಾಸನ, ಬಡವರ ಕಲ್ಯಾಣದ ಮೋದಿ ಸರ್ಕಾರಕ್ಕೆ 11 ವರ್ಷವಾದ ನಿಮಿತ್ತ ಸಂಭ್ರಮ, ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.

ಬದ್ಧತೆಯ ಆಡಳಿತ

BJP 2
ಕೇವಲ ರಾಜಕಾರಣ, ಅಧಿಕಾರ ಅನುಭವಿಸಲು ಬಿಜೆಪಿ ಸೀಮಿತವಾಗಿಲ್ಲ. ದೇಶದ ಅಭಿವೃದ್ಧಿಯ ಬದ್ಧತೆ ಹೊಂದಿದೆ. ಅದಕ್ಕೆ ಮೋದಿ ನೇತೃತ್ವದ 11 ವರ್ಷದ ಅತ್ಯುತ್ತಮ ಆಡಳಿತವೇ ಸಾಕ್ಷಿ. ಪ್ರಣಾಳಿಕೆಯ ಎಲ್ಲ ಭರವಸೆ ನೀಡಿದ್ದಾರೆ. 2014ರಲ್ಲಿ ಕೇವಲ 7 ರಾಜ್ಯಗಳಲ್ಲಿದ್ದ ಬಿಜೆಪಿ ಅಧಿಕಾರ ಇದೀಗ 21 ರಾಜ್ಯಕ್ಕೆ ವಿಸ್ತರಣೆ ಆಗಿದೆ. ದಿನಕ್ಕೆ 37 ಕಿಮೀಯಷ್ಟು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ದೇಶದಲ್ಲಿ ಮೂಲ ಸೌಕರ್ಯ ಹೆಚ್ಚಿಸಲು ಪ್ರಧಾನಿ ಮೋದಿ ಆದ್ಯತೆ ನೀಡಿದ್ದಾರೆ ಎಂದರು.

ಅಧ್ಯಕ್ಷರಿಗೆ ಸನ್ಮಾನ

ಮೇ 25ರಂದು ನಡೆದ ಪ್ರಧಾನಿ ಮೋದಿ ಅವರ ಮನ್​ ಕೀ ಬಾತ್​ ಕಾರ್ಯಕ್ರಮವನ್ನು ಉಡುಪಿ ನಗರ, ಗ್ರಾಮಾಂತರ ಹಾಗೂ ಬೈಂದೂರು ಮಂಡಲದ ಬೂತ್​ಗಳಲ್ಲಿ ಶೇ.100 ವೀಕ್ಷಣಾ ವರದಿ ಅಪ್ಲೋಡ್​ಗಾಗಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ, ಜಿಲ್ಲಾ ಕಾರ್ಯಾಗಾರದ ಸಂಚಾಲಕ ರಾಜೇಶ ಕಾವೇರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಕಿಣಿ, ದಿನಕರ್​ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ ಉಪಸ್ಥಿತರಿದ್ದರು.

ರಮ್ಯಾ ಉಪ್ಪೂರು ವಂದೇ ಮಾತರಂ ಗೀತೆ ಹಾಡಿದರು. ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯಾಗಾರ ಸಹ ಸಂಚಾಲಕ ಶ್ರೀಕಾಂತ ನಾಯಕ ಸ್ವಾಗತಿಸಿದರು. ಜಿಲ್ಲಾ ಕಾರ್ಯಾಗಾರದ ಸಹ ಸಂಚಾಲಕ ದಿಲೇಷ್​ ಶೆಟ್ಟಿ ವಂದಿಸಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಜಮ್ಮು ಕಾಶ್ಮೀರಕ್ಕಿದ್ದ 370ನೇ ವಿಧಿಯ ರದ್ದತಿ ಕನಸನ್ನು ಪ್ರಧಾನಿ ಮೋದಿ ನನಸಾಗಿಸಿದ್ದಾರೆ. 4 ಕೋಟಿ ವಸತಿ, 12 ಕೋಟಿ ಶೌಚಾಲಯ, 68 ಲಕ್ಷಕ್ಕೂ ಅಧಿಕ ಬೀದಿ ವ್ಯಾಪಾರಿಗಳಿಗೆ ನೆರವು, ಮುದ್ರಾ ಯೋಜನೆಯಡಿ ಉದ್ಯಮಕ್ಕೆ ಸಾಲದ ನೆರವು ನೀಡಿದ್ದಾರೆ. | ಕೆ.ಉದಯಕುಮಾರ್​ ಶೆಟ್ಟಿ. ಬಿಜೆಪಿ ಮಂಗಳೂರು ವಿಭಾಗದ ಸಂಚಾಲಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net