

ಗುಳೇದಗುಡ್ಡ: ತ್ಯಾಗ ಬಲಿದಾನ ಹಾಗೂ ಭಾವೈಕ್ಯದ ಸಂಕೇತ ಹಬ್ಬವಾದ ಮೊಹರಂ ಹಬ್ಬವನ್ನು ಪಟ್ಟಣದಲ್ಲಿ ಭಾನುವಾರ ಹಿಂದು-ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಸ್ಥಳೀಯ ಪುರಸಭೆ ಹತ್ತಿರವಿರುವ ಹಿರೇಮಸೀದಿ ಬಳಿ ಪಟ್ಟಣ ಸೇರಿ ಮುರುಡಿ, ಕೋಟಿಕಲ್ಲ, ಪರ್ವತಿ, ಹುಲ್ಲಿಕೇರಿ ಮತ್ತಿತರ ಗ್ರಾಮಗಳಿಂದ ಆಗಮಿಸಿದ ದೇವರನ್ನು ಹೊತ್ತ ಡೋಲಿಗಳು ಭೇಟಿ ನೀಡಿ ತಮ್ಮ ಗ್ರಾಮಗಳಿಗೆ ತೆರಳಿದವು.
ಪಟ್ಟಣ ಸೇರಿ ಗ್ರಾಮಗಳಿಂದ ಆಗಮಿಸಿದ ಯುವಕರಿಂದ ಹೆಜ್ಜೆ ಕುಣಿತ, ಹುಲಿವೇಷಧಾರಿಗಳ ಕುಣಿತ ಜನರನ್ನು ಸೆಳೆದವು. ಹಿರೇಮಸೀದಿ ಸೇರಿದಂತೆ ನಗರದ ವಿವಿಧ ಮಸೀದಿಗಳಲ್ಲಿ ಹಿಂದು ಮುಸ್ಲಿಮರು ಸಕ್ಕರೆ ಹಂಚುವ ಮೂಲಕ ಭಾವೈಕ್ಯದಿಂದ ಮೊಹರಂ ಹಬ್ಬ ಆಚರಿಸಿದರು.
ಅಳ್ಳೊಳ್ಳಿ ಗುಕ್ಕಾ: ದೇವರಿಗೆ ಹರಕೆ ಹೊತ್ತ ಮಕ್ಕಳು ಹಾಗೂ ಯುವಕರು ದೇಹಕ್ಕೆ ಹಾಗೂ ಮುಖಕ್ಕೆ ಕಪ್ಪು ಮಸಿ ಅಥವಾ ಬಣ್ಣ ಹಚ್ಚಿಕೊಂಡು ತಲೆ ಮೇಲೆ ವಿಶೇಷವಾಗಿ ತಯಾರಿಸಲಾದ ಬಣ್ಣದ ಹಾಳೆ ಅಂಟಿಸಿದ ಟೊಪ್ಪಿಗೆ ಧರಿಸಿ ದೇವರಿಗೆ ಹರಕೆ ತೀರಿಸಿದರು.
ಸಿಂಗಾರಗೊಂಡಿದ್ದ ದೇವರನ್ನು ಹೊತ್ತು ಡೋಲಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಹಿರೇಮಸೀದಿ ಹತ್ತಿರ ಜನರು ತಂಡೋಪ ತಂಡವಾಗಿ ನಿಂತು ದೇವರ ದರ್ಶನ ಪಡೆದರು.