ಸಂವಿಧಾನ ಶಿಲ್ಪಿಯ ಜಯಂತ್ಯುತ್ಸವ, ಎಲ್ಲೆಡೆ ಸಂಭ್ರಮಾಚರಣೆ

IMG-20250414-WA0093.jpg
Published on

ಮಹನೀಯರ ಪ್ರತಿಮೆಗಳಿಗೆ ಮಾರ್ಲಾಪಣೆ, ಕಲಾ ತಂಡಗಳೊಂದಿಗೆ ಬೃಹತ್ ಮೆರವಣಿಗೆ, ರಾರಾಜಿಸಿದ ನೀಲಿ ಧ್ವಜಗಳು, ಸಾಧಕರಿಗೆ ಸನ್ಮಾನ, ಭಾಷಣದಲ್ಲಿ ಗುಣಗಾನ ಸೇರಿದಂತೆ ವಿವಿಧ ಚಟುವಟಿಕೆಯೊಂದಿಗೆ ಸಂಭ್ರಮದಿಂದ ಜಿಲ್ಲಾದ್ಯಂತ ಡಾ ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಸಂವಿಧಾನ ಶಿಲ್ಪಿ, ಭಾರತದ ಸಂವಿಧಾನದ ಸಂದೇಶಗಳನ್ನು ಸಾರಲಾಯಿತು. ಚಿಕ್ಕಬಳ್ಳಾಪುರ ನಗರದ ನಗರಸಭೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಜಿಲ್ಲಾಡಳಿತ, ಜಿ.ಪಂ, ಸಮಾಜ ಕಲ್ಯಾಣ ಇಲಾಖೆಯು ಸೋಮವಾರ ಕೈಗೊಂಡಿದ್ದ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ 134 ನೇ ಜನ್ಮ ದಿನಾಚರಣೆ ಹಾಗೂ ಭಾರತದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ 118 ನೇ ಜಯಂತ್ಯುತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಉದ್ಘಾಟಿಸಿದರು.
ಅಂಬೇಡ್ಕರ್ ತತ್ವ ಚಿಂತನೆಗಳಿಂದಲೇ ಭಾರತವು ಜಗತ್ತಿನಲ್ಲಿ ಯಶಸ್ವಿ ದೇಶವಾಗಿ ಮುನ್ನಡೆಯುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ  ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್  ಅವರು ಜಗತ್ತಿನ ಮೇಲ್ಪಂಕ್ತಿಯ ಆರ್ಥಿಕ ತಜ್ಞರಾಗಿದ್ದು, ಅವರು ಎಲ್ಲರೂ ಒಪ್ಪುವಂತಹ ದೊಡ್ಡ ಚಿಂತಕರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ  ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಶಾಸಕ ಪ್ರದಿಪ್ ಈಶ್ವರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವ ರೆಡ್ಡಿ, ಜಿ.ಪಂ.ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎನ್.ಯಲುವಳ್ಳಿ ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ , ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ತಹಸೀಲ್ದಾರ್ ಅನಿಲ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ ಮತ್ತಿತರರು ಇದ್ದರು

*ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಆರಂಭದಲ್ಲಿ ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು.

*ಬೃಹತ್ ಮೆರವಣಿಗೆ
ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಅಂಬೇಡ್ಕರ್ ಸ್ತಬ್ಧ ಚಿತ್ರಗಳು, ಹೂವಿನ ಪಲ್ಲಕ್ಕಿಗಳು ಹಾಗೂ  ಕಲಾತಂಡಗಳ ಮೆರವಣಿಗೆ ನಡೆಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಮುದಾಯದ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಹಲವರು ಘೋಷಣೆಗಳೊಂದಿಗೆ ಕಾಲ್ನಡಿಗೆಯಲ್ಲಿ ಸಾಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net