

ಸವದತ್ತಿ: ತ್ಯಾಗ, ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಪಟ್ಟಣದಲ್ಲಿ ಶುಕ್ರವಾರ ಮುಸ್ಲಿಮರು ಶ್ರದ್ದೆ ಮತ್ತು ಭಕ್ತಿಯಿಂದ ಆಚರಿಸಿದರು.
ಇಲ್ಲಿನ ಮಕ್ಕಾ ಮಸೀದಿಯ ಬಳಿ ಸಮಾವೇಶಗೊಂಡ ಸಹಸ್ರಾರು ಮುಸ್ಲಿಮರು ಅಲ್ಲಾಹು ನಾಮಸ್ಮರಣೆ ಮಾಡಿದರು. ಮಕ್ಕಳೊಂದಿಗೆ ಪಟ್ಟಣದ ಎಸ್‌ಎಲ್‌ಎಒ ಕ್ರಾಸ್ ಹತ್ತಿರದ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಧರ್ಮ ಗುರುಗಳಾದ ಮೌಲಾನಾ ಇಮ್ಮಿಯಾಜ್ ಅತ್ತಾರ ಹಬ್ಬದ ಸಂದೇಶ ಸಾರಿ, ಬಕ್ರೀದ್ ಹಬ್ಬದ ಆಚರಣೆ ಹಾಗೂ ದಾನ-ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು. ಪ್ರಾರ್ಥನೆಯ ಬಳಿಕ ಮುಸ್ಲಿಮರು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಮುಸ್ಲಿಂ ಸಮುದಾಯದವರು ನಡೆಸುವ ವ್ಯಾಪಾರ, ವಹಿವಾಟು ಪಟ್ಟಣದಲ್ಲಿ ಸ್ಥಗಿತಗೊಂಡಿತ್ತು. ಪಟ್ಟಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಹೊಸ ಬಟ್ಟೆಗಳಲ್ಲಿ, ಸಾಂಪ್ರದಾಯಿಕ ಪೋಷಾಕುಗಳಲ್ಲಿ ಕಂಗೊಳಿಸುತ್ತಿದ್ದ ಮಕ್ಕಳು ಹಬ್ಬದ ಸಂಭ್ರಮ ಹೆಚ್ಚಿಸಿದ್ದರು.
ಮಲ್ಲಮ್ಮನ ಬೆಳವಡಿ ವರದಿ: ಹಿಂದು, ಮುಸ್ಲಿಂ ಭಾವೈಕ್ಯತೆಯ ಗ್ರಾಮ ಮಲ್ಲಮ್ಮನ ಬೆಳವಡಿಯಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಮುಸಲ್ಮಾನರು ಗ್ರಾಮದ ಈದ್ಗಾ ಮೈದಾನದಲ್ಲಿ ಶನಿವಾರ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಜೈನುಲ್ ಸಾಬ್ ಕಿತ್ತೂರ, ಹಾಜಿ ಸಲೀಂ ಮುಲ್ಲಾ, ಅಕ್ಬರ್ ಅತಾಮಾಲಿಕ್, ಅಮೀರ್ ಹಾದಿಮನಿ, ಅಲ್ಲಾಭಕ್ಷ್ ದಿಲ್ಲುನಾಯ್ಕ, ಬಾಬು ದೊಡ್ಡಮನಿ, ಹುಸೇನ್ ಸಾಬ್ ಇತರರಿದ್ದರು.