ತ್ಯಾಗರ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಭ್ರಮ ಶನಿವಾರ

15Thyagarthi2
ತ್ಯಾಗರ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಪಾಲ್ಗೊಂಡ ಮಕ್ಕಳು.
Published on

ತ್ಯಾಗರ್ತಿ:ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಶಿಕ್ಷಣ ಇಲಾಖೆಯ ಸೂಚನೆಯಂತೆ ಸಂಭ್ರಮ ಶನಿವಾರ ಎಂಬ ಶೀರ್ಷಿಕೆಯಲ್ಲಿ ಶಾಲಾ ಮಕ್ಕಳಿಗೆ ಕೌಶಲ ತರಬೇತಿ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆ ನಡೆಸಲಾಯಿತು.
ಈ ದಿನ ವಿಶೇಷವಾಗಿ ನೋ ಬ್ಯಾಗ್ ಡೇ ಹಾಗೂ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಮತದಾನ ಪ್ರಕ್ರಿಯೆ ಮೂಲಕ ನಡೆಸಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು. ಪ್ರತಿದಿನವೂ ರಾಶಿ ರಾಶಿ ಪುಸ್ತಕದ ಹೊರೆ ಹೊತ್ತು ಶಾಲೆಗೆ ಬರುತ್ತಿದ್ದ ಮಕ್ಕಳು ಶನಿವಾರ ಖುಷಿ ಖುಷಿಯಾಗಿ ಸಂಭ್ರಮದದಿಂದ ಆಗಮಿಸಿ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಬೆಳಗ್ಗೆ ಮಳೆಯ ಬಿಡುವಿನ ನಡುವೆ ಶಾಲಾ ಆಟದ ಮೈದಾನದಲ್ಲಿ ಮಕ್ಕಳಿಗೆ ಯೋಗ, ವ್ಯಾಯಾಮ ಅಭ್ಯಾಸ ಮಾಡಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಮತದಾನ ನಡೆಸಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು. 260 ವಿದ್ಯಾರ್ಥಿಗಳು ಮತದಾನ ಮಾಡಿದರು.
ಮಕ್ಕಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಂವಿಧಾನ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಲಾಯಿತು. ದೇಶದಲ್ಲಿ ನಡೆಯುವ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸುವ ಬಗ್ಗೆ ತಿಳಿವಳಿಕೆ ನೀಡುವುದು ಈ ಕಾರ್ಯಕ್ರಮದ ಉದ್ದೇಶ ಆಗಿತ್ತು ಸರ್ಕಾರಿ ಪ್ರೌಢಶಾಲಾ ಶಿಕ್ಷಕರು ಮಕ್ಕಳಿಗೆ ದೇಶದಲ್ಲಿ, ರಾಜ್ಯದಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆ ಪ್ರಕ್ರಿಯೆ ಗಳನ್ನು ವಿವರಿಸಿದರು. ಮುಂದಿನ ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ವಿಜ್ಞಾನ ತಂತ್ರಜ್ಞಾನ ಗಳ ಬಗ್ಗೆ ಮಾಹಿತಿ ನೀಡುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಮುಖ್ಯ ಶಿಕ್ಷಕ ನಟರಾಜ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net