ಮುದ್ದೇನಹಳ್ಳಿಯಲ್ಲಿ ಸದ್ಗುರು ಸಾಯಿ ಹುಟ್ಟು ಹಬ್ಬದ ಸಂಭ್ರಮ

26CBP2
Published on

ಚಿಕ್ಕಬಳ್ಳಾಪುರ: ಅಪಾರ ಸಂಖ್ಯೆಯ ಭಕ್ತ ಸಮೂಹ, ಆಧ್ಯಾತ್ಮಿಕ ಮತ್ತು ಸಾಂಸತಿಕ ಚಟುವಟಿಕೆಯೊಂದಿಗೆ ಸದ್ಗುರು ಶ್ರೀ ಮಧುಸೂಧನ ಸಾಯಿ 45ನೇ ವರ್ಧಂತಿ ಉತ್ಸವವನ್ನು ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯಲ್ಲಿ ಶುಕ್ರವಾರ ಆಚರಿಸಲಾಯಿತು.

ಇಲ್ಲಿನ ಪ್ರೇಮಾಂಮೃತಂ ಸಭಾಂಗಣದಲ್ಲಿ ಎಲ್ಲರಿಗೂ ಸಿಹಿ ತಿಂಡಿಗಳ ವಿತರಣೆ, ದಿವ್ಯ ಸಂದೇಶ ಮತ್ತು ಪುಸ್ತಕದ ಬಿಡುಗಡೆಯ ಮೂಲಕ ಸಂಭ್ರಮಿಸಲಾಯಿತು.

ಸ್ವಾರ್ಥವಿಲ್ಲದ ಸಣ್ಣ ಕಾರ್ಯವೂ ಸಹ ಮಹತ್ತರವಾದ ಫಲಿತಾಂಶಕ್ಕೆ ನಾಂದಿಯಾಗುತ್ತದೆ. ಸತ್ಕಾರ್ಯಗಳು ಎಂದೂ ವ್ಯರ್ಥವಾಗುವುದಿಲ್ಲ. ಸತ್ವದಲ್ಲಿ ನಡೆಯುತ್ತಾ ಸದಾಚಾರ ಸಂಪನ್ನನಾಗಿರುವಾಗ ಮುನ್ನಡೆಯ ಹಾದಿಯ ಯಾವುದೇ ಭಯವಿರುವುದಿಲ್ಲ. ಅಜ್ಞಾನ ಅಂಧಕಾರಗಳು ಸೇರಿದಾಗ ಮಾತ್ರವೇ ಭಯ ಮತ್ತು ಸಂಕೋಚ ಕಾಣಿಸಿಕೊಳ್ಳುತ್ತದೆ ಎಂದು ಸದ್ಗುರು ಶ್ರೀ ಮಧುಸೂಧನ ಸಾಯಿ ಸಂದೇಶದಲ್ಲಿ ತಿಳಿಸಿದರು.

ಮಾಧವನೊಂದಿಗೆ ಮಾಧವನಿಗಾಗಿ ಮಾನವನು ಶ್ರಮಿಸಿದಾಗ ಮಾಧವನಾಗಿಯೇ ಪರಿವರ್ತನೆಗೊಳ್ಳುತ್ತಾನೆ. ಸತ್ಕಾರ್ಯಗಳನ್ನು ಪ್ರೋತ್ಸಾಹಿಸುತ್ತಾ ಒಳ್ಳೆಯ ವಿಚಾರಗಳು ಮತ್ತು ಕಾರ್ಯಗಳಿಗೆ ಪ್ರೇರಣೆ ನೀಡುವವರೇ ನಿಜವಾದ ಗುರುಗಳು. ಇಂತಹ ಮಹನೀಯರ ಹೆಜ್ಜೆ ಗುರುತಿನಲ್ಲಿ ಸಾಗಬೇಕು. ಭಾವನಾತ್ಮಕವಾಗಿ ತುರ್ತು ಅವಶ್ಯಕತೆಗಳಿಗೆ ಸ್ಪಂದಿಸಬೇಕು ಎಂದರು.

ಅಮೆರಿಕಾದ ಹಾರ್ಡ್​ ರಾಕ್​ ಕೆಫೆ ಸಂಸ್ಥಾಪಕ ಡಾ ಐಸಾಕ್​ ಟೈಗ್ರೆಟ್​, ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎಂ. ನರಸಿಂಹಮೂರ್ತಿ ಇದ್ದರು.

*ದಿವ್ಯ ಕಥಾಮೃತ ಬಿಡುಗಡೆ*

ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ವಿರಚಿತ ಆತ್ಮಚರಿತ್ರೆ "ಸ್ಟೋರಿ ಡಿವೈನ್​ 3" -( ದಿವ್ಯಕಥಾಮೃತ) ಕೃತಿಯು ಲೋಕಾರ್ಪಣೆಗೊಳಿಸಲಾಯಿತು. ಸದ್ಗುರು ಸ್ಮರಣೆಯಲ್ಲಿ ಗುರುವಾರ ಗ್ರಾಮ ಸೇವೆ ಮತ್ತು ಎರಡನೇ ದಿನ ಶುಕ್ರವಾರ ಆಧ್ಯಾತ್ಮಿಕ ಮತ್ತು ಸಾಂಸತಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net