

ಖಾನಾಪುರ: ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಶತಮಾನೋತ್ಸವ ಹಾಗೂ ವಿಜಯದಶಮಿ ಅಂಗವಾಗಿ ಭಾನುವಾರ ಪಥ ಸಂಚಲನ ನಡೆಸಿತು. ಬಿಳಿ ಅಂಗಿ, ಖಾಕಿ ಪ್ಯಾಂಟ್, ಕಪ್ಪು ಟೋಪಿ ಮತ್ತು ದಂಡುಕ ಹಿಡಿದ ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ಅನೇಕ ಸ್ಥಳಗಳಲ್ಲಿ ಹೂವು ಮತ್ತು ರಂಗೋಲಿ ಹಾಕಿ ಮೆರವಣಿಗೆಗೆ ಸ್ವಾಗತಿಸಲಾಯಿತು. ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಮೈದಾನದಿಂದ ಮೆರವಣಿಗೆ ಪ್ರಾರಂಭವಾಯಿತು. ಸ್ವಾಮಿ ವಿವೇಕಾನಂದ ಶಾಲೆಯ ಆವರಣದಲ್ಲಿ ಪ್ರಬುದ್ಧ ಚಿಂತನ ಮಂಥನ ನಡೆಯಿತು.
ಖಾನಾಪುರ ತಾಲೂಕಿನ ಬಾಳೇವಾಡಿ ಮಠದ ಸಿದ್ಧನಾಥ ಮಹಾರಾಜ ತೋಳಗಿ, ಮಠದ ವೈಷ್ಣನಾಥ ಶಿವಾಚಾರ್ಯ ಸ್ವಾಮೀಜಿ, ಅವರೊಳ್ಳಿ ಮಠದ ಚನ್ನಬಸವ ದೇವರು, ನಂದಗಡದ ಮಾರುತಿ ಮಹಾರಾಜರು, ತೋಪಿನಕಟ್ಟಿ ಸಿದ್ಧಾಶ್ರಮಮಠದ ರಾಮದಾಸ ಮಹಾರಾಜರು ಇತರರಿದ್ದರು. ಸ್ವಯಂಸೇವಕರು, ರಾಜಕೀಯ ಪ್ರತಿನಿಧಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.