ಜನಸಂಖ್ಯಾ ವಿಶ್ವ ದಿನ ಆಚರಣೆ; ಜನಜಾಗೃತಿ ಜಾಥಾಗೆ ಚಾಲನೆ

JANASANKHYA DINA RALY
ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದ ಎದುರು ಜನ ಜಾಗೃತಿ ಜಾಥಾಗೆ ಡಾ. ಚನ್ನಮ್ಮ ಕಟ್ಟಿ ಹಾಗೂ ಡಾ. ಬಸವರಾಜ ಹುಬ್ಬಳಿ ಜಂಟಿಯಾಗಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಡಾ. ರಾಜೇಶ್ವರಿ ಗೊಲಗೇರಿ, ಡಾ. ಕವಿತಾ ದೊಡ್ಡಮನಿ, ಡಾ. ಸಂಪತ್ತ ಗುಣಾರಿ ಮತ್ತಿತರರಿದ್ದಾರೆ.
Published on

ವಿಜಯಪುರ: ವಿಶ್ವ ಜನಸಂಖ್ಯಾ ದಿನಾಚರಣೆ ಹಿನ್ನೆಲೆ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಹಾಗೂ ವಿವಿಧ ನರ್ಸಿಂಗ್ ಕಾಲೇಜಗಳ ಸಂಯುಕ್ತ ಆಶ್ರಯದಲ್ಲಿ ಜನ ಜಾಗೃತಿ ಜಾಥಾ ನಡೆಯಿತು.

ನಗರದ ಸಿದ್ಧೇಶ್ವರ ದೇವಸ್ಥನದ ಎದುರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉತ್ತರ ಕರ್ನಾಟಕ ಉಪನಿರ್ದೇಶಕ ಡಾ. ಚನ್ನಮ್ಮ ಕಟ್ಟಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಹುಬ್ಬಳಿ ಜಂಟಿಯಾಗಿ ಹಸಿರು ನಿಶಾನೆ ತೋರುವ ಮೂಲಕ ಜಾಥಾಗೆ ಚಾಲನೆ ನೀಡಿದರು.

ಡಾ. ಚನ್ನಮ್ಮ ಕಟ್ಟಿ ಮಾತನಾಡಿ, ಮಿತಿಮೀರಿದ ಜನಸಂಖ್ಯೆ ದೇಶದ ಅಭಿವೃದ್ಧಿಗೆ ಮಾರಕ. ಜನಸಂಖ್ಯೆ ನಿಯಂತ್ರಣಕ್ಕೆ ಜಾಗೃತಿ ಅತ್ಯವಶ್ಯಕವಾಗಿದೆ. ಪ್ರತಿಯೊಬ್ಬರಲ್ಲೂ ತಿಳಿವಳಿಕೆ ಮೂಡಬೇಕು. ಅಂದಾಗ ಮಾತ್ರ ಜನಸಂಖ್ಯೆ ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಹೇಳಿದರು.

ಡಾ. ಬಸವರಾಜ ಹುಬ್ಬಳಿ ಮಾತನಾಡಿ, ದೇಶದಲ್ಲಿ ಪ್ರತಿ ವರ್ಷ 1 ಕೋಟಿ 55 ಲಕ್ಷ ಜನಸಂಖ್ಯೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಪ್ರತಿ ವರ್ಷ 7 ಲಕ್ಷ 75 ಸಾವಿರದಷ್ಟು ಜನಸಂಖ್ಯೆ ಹೆಚ್ಚವರಿಯಾಗುತ್ತಿದೆ. ಈ ವೇಗದಲ್ಲಿ ಜನಸಂಖ್ಯೆಯು ಬೆಳೆಯುತ್ತಿದ್ದರೆ ಭಾರತವು ಮುಂದಿನ 35 ವರ್ಷಗಳಲ್ಲಿ 200 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಲಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಸೂಕ್ತ ಜಾಗೃತಿ ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಿಳಿವಳಿಕೆ ಮೂಡಿಸಲಾಗುತ್ತಿದೆ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜೇಶ್ವರಿ ಗೊಲಗೇರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕವಿತಾ ದೊಡ್ಡಮನಿ, ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಡಾ. ಸಂಪತ್ತ ಗುಣಾರಿ, ತಾಲೂಕಾ ಆರೋಗ್ಯ ಅಧಿಕಾರಿ ಡಾ. ಪರಶುರಾಮ ಹಿಟ್ನಳ್ಳಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ. ಕೊಲೂರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ, ರೇಖಾ ದಶವಂತ ಮತ್ತಿತರರಿದ್ದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಆರ್. ಬಾಗವಾನ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net