

ತಿ.ನರಸೀಪುರ: ಹದಿನೆಂಟು ವರ್ಷಗಳ ಬಳಿಕ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಡಿಗೇರಿಸಿಕೊಂಡ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬುಧವಾರ ಕ್ರೀಡಾಪಟುಗಳು ಹಾಗೂ ಆರ್‌ಸಿಬಿ ಅಭಿಮಾನಿಗಳು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಪಟ್ಟಣದ ಕಬಿನಿ ಅತಿಥಿಗೃಹದಲ್ಲಿ ಜಮಾಯಿಸಿದ ಆರ್‌ಸಿಬಿ ಅಭಿಮಾನಿಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ಅನ್ನು ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗೆಲುವು ಸಾಧಿಸಿದ್ದಕ್ಕೆ ಸಂಭ್ರಮಿಸಿದರು.
ಸೇವಾಶ್ರಯ ಫೌಂಡೇಷನ್ ಅಧ್ಯಕ್ಷ ಆರ್.ಮಣಿಕಂಠ ರಾಜ್ ಗೌಡ ಮಾತನಾಡಿ, 18 ವರ್ಷಗಳ ಬಳಿಕ ಕನ್ನಡಿಗರಿಗೆ ಗೌರವ ತಂದು ಕೊಡುವ ಕೆಲಸವನ್ನು ಆರ್‌ಸಿಬಿ ಕ್ರಿಕೆಟ್ ತಂಡ ಮಾಡಿದೆ. ಆರ್‌ಸಿಬಿ ಗೆಲ್ಲಲೇಬೇಕೆಂದು ಹಲವು ವರ್ಷಗಳಿಂದ ಕ್ರೀಡಾಭಿಮಾನಿಗಳು ಮಾಡಿದಂಥ ದೇವರ ಪೂಜೆ ಹಾಗೂ ಪ್ರಾರ್ಥನೆ ಕೊನೆಗೂ ಫಲ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವಿಜಯೋತ್ಸವದಲ್ಲಿ ವಿಕಾಸ್, ಚೇತನ್, ಮಹೇಶ್, ನವೀನ್, ಗೋಪಿ ಬೋರೇಗೌಡ, ನಿಖಿಲ್, ಕುಮಾರ್, ಅರುಣ್,ಇಮ್ರಾನ್, ಕಿಶೋರ್ ಕುಮಾರ್, ಸಿದ್ದು ಇತರರು ಇದ್ದರು.