

ಹನೂರು: ತಾಲೂಕಿನ ಎಲ್ಲೇಮಾಳ ಗ್ರಾಮದ ಮಕ್ಕಳ ಮಾರಮ್ಮ ಹಾಗೂ ಕೌದಳ್ಳಿಯ ದಂಡಿನ ಮಾರಮ್ಮ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಮಾಜಿ ಶಾಸಕ ಆರ್.ನರೇಂದ್ರ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಗ್ರಾಮಸ್ಥರಿಗೆ ಹಬ್ಬದ ಶುಭಾಶಯ ಕೋರಿದರು.
ಈ ವೇಳೆ ಮಾಜಿ ಶಾಸಕರು ಮಾತನಾಡಿ, ಹನೂರು ಭಾಗದಲ್ಲಿ ಇದೀಗ ಗ್ರಾಮದೇವತೆ ಮಾರಮ್ಮನ ಹಬ್ಬಗಳ ಪರ್ವ. ಹಾಗಾಗಿ ಬಹುತೇಕ ಗ್ರಾಮಗಳಲ್ಲಿ ಗ್ರಾಮಸ್ಥರೆಲ್ಲರೂ ಒಟ್ಟಗೂಡಿ ಶಾಂತಿ, ಸೌಹಾರ್ದದಿಂದ ಹಬ್ಬವನ್ನು ಆಚರಿಸುತ್ತಿರುವುದು ಸಂತಸದ ಸಂಗತಿ. ಕಳೆದ ವರ್ಷ ತಾಲೂಕಿನಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಬರ ಆವರಿಸಿತ್ತು. ಇದರಿಂದ ಜನ-ಜಾನುವಾರುಗಳು ಸಮಸ್ಯೆಯನ್ನು ಎದುರಿಸಬೇಕಾಯಿತು. ಆದರೆ ಈಗ ಕ್ಷೇತ್ರದ ಆರಾಧ್ಯ ದೈವ ಮಾದಪ್ಪ, ಸಿದ್ದಪ್ಪಾಜಿ ಹಾಗೂ ಇನ್ನಿತರ ದೇವರುಗಳ ಕೃಪೆಯಿಂದ ಕಳೆದ 15 ದಿನಗಳಿಂದ ಆಗಾಗ್ಗೆ ಉತ್ತಮ ಮಳೆಯಾಗುತ್ತಿದೆ. ಗ್ರಾಮಗಳಲ್ಲಿ ತಲೆದೋರಿದ್ದ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳ ಮೇವಿನ ಸಮಸ್ಯೆ ಕೊಂಚ ನೀಗಿದೆ. ಈ ವರ್ಷ ಉತ್ತಮ ಮಳೆ, ಬೆಳೆಯಾಗುವುದರ ಮೂಲಕ ಜನರಲ್ಲಿ ನೆಮ್ಮದಿ ತರಲಿ ಎಂದು ಆಶಿಸಿದರು.
ಪಪಂ ಸದಸ್ಯ ಹರೀಶ್‌ಕುಮಾರ್, ಮುಖಂಡರಾದ ನಾಗೇಶ್, ಮಹದೇವ, ಶಿವಕುಮಾರ್, ನಾಗರಾಜು, ನಟರಾಜು ಹಾಗೂ ಇನ್ನಿತರರು ಇದ್ದರು.