ಅವಳಿ ದೇವತೆಗಳ ಅಮ್ಮನ ಹಬ್ಬ ಆಚರಣೆ

SRP_25-02jpj
ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಶ್ರೀಚಿಕ್ಕಮ್ಮ ಹಾಗೂ ಶ್ರೀದೊಡ್ಡಮ ಅವಳಿ ದೇವಿಯರ ಅಮ್ಮನ ಹಬ್ಬವನ್ನು ಗ್ರಾಮಸ್ಥರು ಭಕ್ತಿ ಭಾವದಿಂದ ನೆರವೇರಿಸಿದರು.
Published on

ಶ್ರೀರಂಗಪಟ್ಟಣ: ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಅವಳಿ ದೇವತೆಗಳ ಅಮ್ಮನ ಹಬ್ಬವನ್ನು ಗ್ರಾಮಸ್ಥರು ಶ್ರದ್ದಾ ಭಕ್ತಿಯೊಂದಿಗೆ ವಿಜೃಂಭಣೆಯಿಂದ ಆಚರಿಸಿದರು.

ಗ್ರಾಮ ಹೊರವಲಯದ ವಿರಿಜಾ ನಾಲೆಯ ಸಮೀಪದ ಕೃಷಿಭೂಮಿಗಳ ನಡುವೆ ಇರುವ ದೇವಾಲಯದಲ್ಲಿ ಶ್ರೀಚಿಕ್ಕಮ್ಮ ದೇವಿ ಹಾಗೂ ದೊಡ್ಡಮ್ಮದೇವಿ ಅವಳಿ ಸಹೋದರಿಯರ ಮೂರ್ತಿಗಳಿಗೆ ವಿಶೇಷ ಅಲಂಕಾರದೊಂದಿಗೆ ಅರ್ಚಕ ಮಂಜುನಾಥ್ ಹೋಮ-ಹವನ ನಡೆಸಿ ದೀಪ, ಧೂಪ ತೋರಿ ಹಣ್ಣು-ಕಾಯಿಯೊಂದಿಗೆ ತಂಬಿಟ್ಟಿನಾರತಿ ಬೆಳಗಿದರು.

ಬಳಿಕ ವಾರದ ದಾಸಪ್ಪನ ನೇತೃತ್ವದಲ್ಲಿ ಕುಮಾರ್ ಮತ್ತು ನಾರಾಯಣ್ ಎಂಬುವರು ಸರ್ವಾಲಾಂಕೃತಗೊಂಡ ಅವಳಿ ದೇವತೆಗಳ ಉತ್ಸವವನ್ನು ಹೊತ್ತು ಗ್ರಾಮದ ವಿವಿಧ ಬೀದಿಗಳಲ್ಲಿ ವೀರಮಕ್ಕಳು ಹಾಗೂ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಸಾಗಿದರು. ಈ ವೇಳೆ ದಾರಿಯುದ್ದಕ್ಕೂ ಪಂಜಿನ ಸೇವೆ, ಈಡುಗಾಯಿ ಮತ್ತು ಕರ್ಪೂರದ ಸೇವೆ ಅರ್ಪಣೆಗೊಂಡವು. ಇನ್ನು ಕುಟುಂಬದ ಒಳಿತಿಗಾಗಿ ಪ್ರಾರ್ಥಿಸಿ ಹರಕೆ ಹೊತ್ತಿದ್ದ ಮಹಿಳೆಯರು ಸಹ ಬಾಯಿಬೀಗ ಹಾಕಿಸಿಕೊಂಡು ಇಷ್ಟಾರ್ಥ ಪ್ರಾಪ್ತಿಗಾಗಿ ದೇವರ ಹಿಂದೆ ಸಾಗಿ ಪೂಜೆ ಅರ್ಪಿಸಿದರು. ಅಂತಿಮವಾಗಿ ಪೂಜಾ ಕಾರ್ಯಗಳ ಬಳಿಕ ಗ್ರಾಮದ ಹೊರವಲಯದ ಗಡಿಯಲ್ಲಿ ಅಮ್ಮನ ಉತ್ಸವವನ್ನು ಪ್ರತಿಷ್ಠಾಪಿಸಿ ಗ್ರಾಮ ಮತ್ತು ಗ್ರಾಮಸ್ಥರಿಗೆ ಒಳಿತು ಕರುಣಿಸಲು ಪ್ರಾರ್ಥಿಸಿ ಗ್ರಾಮಸ್ಥರು ಮರಳಿದರು.

ಗ್ರಾಮದ ಯಜಮಾನ್ ಶ್ರೀಧರ್, ಹತ್ತಿರ ಮನುಷ್ಯ ಶ್ರೀನಿವಾಸ್ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಜನರು ಈ ವೇಳೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net