

ವಿಜಯವಾಣಿ ಸುದ್ದಿಜಾಲ ಧಾರವಾಡ
ಮೂರು ದಿನಗಳ ಕಾಲ ಸಂಭ್ರಮದಿಂದ ಆಚರಿಸುವ ಬೆಳಕಿನ ಹಬ್ಬ ದೀಪಾವಳಿ ಸಡಗರ ಜಿಲ್ಲೆಯಲ್ಲಿ ಜೋರಾಗಿದೆ. ಬೆಲೆ ಏರಿಕೆ ನಡುವೆಯೂ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ ಭರದಿಂದ ಸಾಗಿದೆ.
ಮೊದಲ ದಿನವಾದ ನರಕ ಚತುರ್ದಶಿ ದಿನದಂದು ಕುಟುಂಬಸ್ಥರೆಲ್ಲ ಸೇರಿ ನಸುಕಿನ ಜಾವದಲ್ಲೇ ಆರತಿ ಮಾಡುವ ಮೂಲಕ ಸಂಭ್ರಮಿಸಿದರೆ, ಅಮಾವಾಸ್ಯೆ ಹಾಗೂ ಪಾಡ್ಯ ದಿನದಂದು ಲಕ್ಷ್ಮೀ ಪೂಜೆ ಸಡಗರ ಜೋರಾಗಿರಲಿದೆ.
ನಗರದ ಬಹುತೇಕ ವ್ಯಾಪಾರಸ್ಥರು ಅಮಾವಾಸ್ಯೆ ದಿನದಂದು ಅಂಗಡಿಗಳ ಪೂಜೆ ನೆರವೇರಿಸಿದರೆ ಕೆಲವರು ಪಾಡ್ಯ ದಿನದಂದು ಪೂಜೆ ಮಾಡಲಿದ್ದಾರೆ. ಸುಭಾಷ್ ರಸ್ತೆ, ಸೂಪರ್ ಮಾರ್ಕೆಟ್, ಲೈನ್ ಬಜಾರ್ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿನ ಅಂಗಡಿಗಳಲ್ಲಿ ಬೆಳಗ್ಗೆ ವಿಶೇಷ ಪೂಜೆ ನಡೆಸಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಅಂಗಡಿ ಪೂಜೆಗಳ ಮಧ್ಯೆ ವಾಹನಗಳ ಖರೀದಿ ಸಹ ಜೋರಾಗಿದೆ. ರೈತರಿಗೆ ಒಕ್ಕಲುತನಕ್ಕೆ ಅತ್ಯಂತ ಶ್ರೇಷ್ಠ ದಿನವಾಗಿದ್ದರಿಂದ ಈ ಸಮಯದಲ್ಲಿ ಟ್ರಾೃಕ್ಟರ್ ಖರೀದಿ ಮಾಡುತ್ತಾರೆ.
ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲೇ ಹಬ್ಬದ ವಾತಾವರಣ ಸಾಕಷ್ಟು ಸಂಭ್ರಮದಿಂದ ಕೂಡಿದೆ. ದೀಪಾವಳಿ ಪಾಡ್ಯ ದಿನವನ್ನು ‘ಹಟ್ಟಿ ಹಬ್ಬ’ ಎಂದೇ ಆಚರಿಸುವುದು ವಾಡಿಕೆ. ಅದರಂತೆ ಜನರು ತಮ್ಮ ಮನೆಯಲ್ಲಿ ಮಂಗಳವಾರ ‘ಹಟ್ಟಿ ಲಕ್ಕವ್ವಳ’ನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಿದ್ದಾರೆ. ಬರೀ ಹಟ್ಟಿ ಲಕ್ಕವ್ವಳ ಪೂಜೆ ಮಾತ್ರವಲ್ಲದೆ ಮನೆಯಲ್ಲಿನ ಎತ್ತುಗಳನ್ನು ಅಲಂಕರಿಸಿ ವಿಶೇಷ ಪೂಜೆ ಸಹ ಸಲ್ಲಿಸಲಿದ್ದಾರೆ. ಬಳಿಕ ಗ್ರಾಮದಲ್ಲಿನ ದೇವಸ್ಥಾನಗಳಿಗೆ ಕರೆದೊಯ್ದು ಅವುಗಳ ಮೆರವಣಿಗೆ ನಡೆಸಲಿದ್ದಾರೆ.
ಇನ್ನು ಪಾಡ್ಯ ದಿನದಿಂದ ಗೌಳಿಗರು ನಡೆಸುವ ಎಮ್ಮೆಗಳ ಓಟ ನೋಡುವುದೇ ಒಂದು ಖುಷಿ. ಬೆಳಗ್ಗೆಯಿಂದಲೇ ಎಮ್ಮೆಗಳ ಸ್ವಚ್ಛತೆ ನಡೆಸಿ ಪೂಜೆ ಸಲ್ಲಿಸುತ್ತಾರೆ. ಸಂಜೆ ಹೊತ್ತಿಗೆ ರಸ್ತೆಗಳಲ್ಲಿ ಓಟ ನಡೆಸುತ್ತಾರೆ. ತಮ್ಮ ಮಾಲೀಕ ಬೈಕ್ ಮೇಲೆ ತೆರಳಿದಂತೆ ಎಮ್ಮೆಗಳು ಸಹ ಓಡಲಿವೆ. ಈ ಓಟದ ಸಂಭ್ರಮ ವೀಕ್ಷಣೆಗೆ ರಸ್ತೆಯುದ್ದಕ್ಕೂ ನೂರಾರು ಜನರು ಜಮಾಯಿಸಿರುತ್ತಾರೆ.