ನಿಗದಿತ ದಿನದಂದೇ ಮಹನೀಯರ ಜಯಂತಿ ಆಚರಣೆ

ತಿ.ನರಸೀಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್ ಮಾತನಾಡಿದರು. ಪಿ.ಎಸ್. ಅನಂತರಾಜು, ರಾಮೇಗೌಡ, ಕರೋಹಟ್ಟಿ ಮಹದೇವಯ್ಯ, ಹುಣಸೂರು ಬಸವಣ್ಣ, ಪುಟ್ಟಯ್ಯ, ಪಾರ್ವತಮ್ಮ ಇದ್ದರು.
ತಿ.ನರಸೀಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್ ಮಾತನಾಡಿದರು. ಪಿ.ಎಸ್. ಅನಂತರಾಜು, ರಾಮೇಗೌಡ, ಕರೋಹಟ್ಟಿ ಮಹದೇವಯ್ಯ, ಹುಣಸೂರು ಬಸವಣ್ಣ, ಪುಟ್ಟಯ್ಯ, ಪಾರ್ವತಮ್ಮ ಇದ್ದರು.
Published on

 ತಿ.ನರಸೀಪುರ: ಸಾಂಪ್ರದಾಯಿಕವಾಗಿ ನಿಗದಿತ ದಿನದಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ ಜನ್ಮ ದಿನವನ್ನು ಆಚರಿಸಲು ತೀರ್ಮಾನಿಸಲಾಯಿತು.

ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್ ಅಧ್ಯಕ್ಷತೆಯಲ್ಲಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಮಾಡಲಾಯಿತು.

ಏ.5ರಂದು ಜಗಜೀವನರಾಮ್ ಹಾಗೂ ಏ.14 ರಂದು ಅಂಬೇಡ್ಕರ್ ಅವರ ಜಯಂತಿಯನ್ನು ಸಾಂಪ್ರದಾಯಿಕವಾಗಿ ಆಚರಿಸಬೇಕಿದ್ದು, ಸಿಎಂ ಸಿದ್ದರಾಮಯ್ಯ ಅವರಿಂದ ದಿನಾಂಕ ಪಡೆದು ಮತ್ತೊಂದು ದಿನ ಉಭಯ ನಾಯಕರ ಜಯಂತಿಯನ್ನು ಸಮುದಾಯದ ಸಹಭಾಗಿತ್ವದಲ್ಲಿ ಅದ್ದೂರಿಯಾಗಿ ಆಯೋಜಿಸಲು ತೀರ್ಮಾನಿಸಲಾಯಿತು. ಅಂಬೇಡ್ಕರ್ ಹಾಗೂ ಜಗಜೀವನರಾಮ್ ಅವರ ಜನ್ಮದಿನವನ್ನು ಒಂದೇ ವೇದಿಕೆಯಲ್ಲಿ ಆಚರಿಸಲು ಎರಡೂ ಸಂಘಗಳ ಅಧ್ಯಕ್ಷರು ಹಾಗೂ ದಲಿತ ಮುಖಂಡರು ಸಹಮತ ವ್ಯಕ್ತಪಡಿಸಿದರು. ಅದಕ್ಕಾಗಿ ಪ್ರತ್ಯೇಕ ಸಭೆಯೊಂದನ್ನು ನಡೆಸಿ, ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲು ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಗಮನಕ್ಕೆ ತಂದು ಅಂತಿಮ ದಿನವನ್ನು ನಿಗದಿಪಡಿಸಲು ನಿರ್ಣಯಿಸಲಾಯಿತು.

ತಾಲೂಕಿನಲ್ಲಿ ಎಸ್ಸಿ/ಎಸ್ಟಿ ಹಿತ ರಕ್ಷಣಾ ಸಮಿತಿ ಸಭೆ ಕರೆಯದ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವಿರುದ್ಧ ದಲಿತ ಜಾಗೃತಿ ಸಮಿತಿ ಜಿಲ್ಲಾ ಅಧ್ಯಕ್ಷ ತುಂಬ್ಲಾ ಮಂಜುನಾಥ್ ಗಮನ ಸೆಳೆದರು. ಇದಕ್ಕೆ ದನಿಗೂಡಿಸಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ದಲಿತ ಹಿತರಕ್ಷಣ ಸಮಿತಿ ಸದಸ್ಯರ ಆಯ್ಕೆಯನ್ನು ಜನಪ್ರತಿನಿಧಿಗಳು ಮಾಡಲಿದ್ದಾರೆ. ಇದರಿಂದ ಸಮುದಾಯಗಳ ಸಮಸ್ಯೆಗಳನ್ನು ತಾಲೂಕು ಆಡಳಿತದ ಗಮನಕ್ಕೆ ತರಲು ಸಾಧ್ಯವಾಗುವುದಿಲ್ಲ ಎಂದು ಮೂವರ ಸದಸ್ಯರ ಆಯ್ಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್, ತಾಲೂಕು ಎಸ್ಸಿ-ಎಸ್ಟಿ ಹಿತರಕ್ಷಣಾ ಸಮಿತಿ ಸಭೆಗೆ ಮೂವರು ಸದಸ್ಯರನ್ನು ಸರ್ಕಾರದ ಮಾರ್ಗಸೂಚಿಯಂತೆ ನಾಮ ನಿರ್ದೇಶನ ಮಾಡಲಾಗಿದೆ ಎಂದು ತಿಳಿಸಿದರು.

ತಾಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ ಮಾತನಾಡಿ, ಜಯಂತಿ ಆಚರಣೆಗೆ ಯಾವುದೇ ಅಧಿಕಾರಿಗಳಿಂದ ಹಣ ಸಂಗ್ರಹಿಸುವುದು ಬೇಡ. ಸರ್ಕಾರದ ನಿಯಮಾವಳಿಗಳ ಪ್ರಕಾರ ನಿಗದಿತ ದಿನದಂದು ಇಬ್ಬರೂ ನಾಯಕರ ಜಯಂತಿ ಆಚರಣೆಯಾಗಲಿ. ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸುವ ನಿರ್ಧಾರವನ್ನು ಎರಡೂ ಸಮುದಾಯಗಳ ತಾಲೂಕು ಸಂಘಗಳ ವಿವೇಚನೆಗೆ ಬಿಡಬೇಕೆಂದು ಸಲಹೆ ನೀಡಿದರು.

ಜನ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ, ಬಾಬೂಜಿ ಜನ ಕಲ್ಯಾಣ ಸಂಘದ ಅಧ್ಯಕ್ಷ ಮಲಯೂರು ಡಿ.ಶಂಕರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಹುಣಸೂರು ಬಸವಣ್ಣ, ತಾಪಂ ಮಾಜಿ ಉಪಾಧ್ಯಕ್ಷ ಕುಕ್ಕೂರು ಪ್ರಸನ್ನ, ಸಿ.ಪುಟ್ಟಮಲ್ಲಯ್ಯ, ಮುಖಂಡ ಎಚ್.ನಾಗರಾಜು ಮಾತನಾಡಿದರು. ತಾಪಂ ಇಒ ಪಿ.ಎಸ್.ಅನಂತರಾಜು, ಸಮಾಜ ಕಲ್ಯಾಣ ಅಧಿಕಾರಿ ರಾಮೇಗೌಡ, ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ಬಾಬೂಜಿ ಸಂಘದ ಅಧ್ಯಕ್ಷ ಸಿ.ಪುಟ್ಟಯ್ಯ, ಎಸ್ಸಿ ಎಸ್ಟಿ ಜಾಗೃತಿ ಸಮಿತಿಯ ಸದಸ್ಯೆ ಪಾರ್ವತಮ್ಮ, ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸೋಸ್ಲೆ ರಾಜಶೇಖರಮೂರ್ತಿ, ಲೋಕೋಪಯೋಗಿ ಎಇಇ ಸತೀಶ್ ಚಂದ್ರನ್, ಪರಿಶಿಷ್ಟ ಪಂಗಡ ಕಲ್ಯಾಣ ಅಧಿಕಾರಿ ಕೋಮಲಾ, ಮೀನುಗಾರಿಕೆ ಸಹಾಯಕ ನಿರ್ದೇಶಕಿ ಶ್ವೇತಾ, ತೋಟಗಾರಿಕೆ ಸಹಾಯಕ ನಿರ್ದೇಶಕಿ ಶಾಂತ, ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ.ವಿ.ವೀರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net