ಸಂಭ್ರಮದಿಂದ ಶ್ರೀರಾಮ ನವಮಿ ಆಚರಣೆ

17 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರೀರಾಮ ನವಮಿ ನಿಮಿತ್ತ ನಗರದ ವಿವಿಧ ಬಡಾವಣೆಗಳಲ್ಲಿನ ಶ್ರೀರಾಮ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ ನೆರವೇರಿಸಲಾಯಿತು.
ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ನಡೆದ ವಿವಿಧ ಧಾಮಿರ್ಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಭಕ್ತರು ಮಧ್ಯಾಹ್ನ ಶ್ರೀರಾಮ ದೇವರ ತೊಟ್ಟಿಲೋತ್ಸವ ನಡೆಸುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾಥಿರ್ಸಿದರು.
ನಗರದ ಮಾಳಮಡ್ಡಿಯ ವನವಾಸಿ ಶ್ರೀ ರಾಮಮಂದಿರ, ಟಿಕಾರ ರಸ್ತೆ ರಾಮ ಮಂದಿರ, ಎಮ್ಮಿಕೇರಿ ಸೀತಾರಾಮ ಮಂದಿರ ಸೇರಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರದ ಮೂಲಕ ಶ್ರೀರಾಮನನ್ನು ಪೂಜಿಸಲಾಯಿತು. ಇದಲ್ಲದೆ ವಿವಿಧ ಬಡಾವಣೆ, ಮಾರುಕಟ್ಟೆ ಪ್ರದೇಶಗಳಲ್ಲಿ ಸಾರ್ವಜನಿಕರು ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾರ್ವಜನಿಕವಾಗಿ ಪಾನಕ, ಮಜ್ಜಿಗೆ ವಿತರಣೆ ಮಾಡಿದರು.
ಮೆರವಣಿಗೆ: ಮಾಳಮಡ್ಡಿ ವನವಾಸಿ ಶ್ರೀ ರಾಮ ಮಂದಿರ ಟ್ರಸ್ಟ್​ ವತಿಯಿಂದ ಸಂಜೆ ಬೃಹತ್​ ಶೋಭಾಯಾತ್ರೆ ಏರ್ಪಡಿಸಲಾಗಿತ್ತು. ಶ್ರೀ ಸುವಿಧ್ಯೇಂದ್ರತಿರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ಶ್ರೀಮದ್​ ವಾಲ್ಮೀಕಿ ರಾಮಾಯಣ ಗ್ರಂಥಗಳು, ಶ್ರೀರಾಮ ದೇವರ ಭಾವಚಿತ್ರದ ಮೆರವಣಿಗೆಯು ಕೋರ್ಟ್​ ವೃತ್ತದಿಂದ ಆರಂಭವಾಗಿ ಮುಖ್ಯ ಅಂಚೆ ಕಚೇರಿ ವೃತ್ತ, ಎಮ್ಮಿಕೇರಿ ಮಾರ್ಗವಾಗಿ ಶ್ರೀರಾಮ ಮಂದಿರ ತಲುಪಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net