ಶ್ರೀ ಭಗೀರಥ ಮಹರ್ಷಿ ಜಯಂತಿ ಆಚರಣೆ

23 HANUR 1
Published on

ಹನೂರು: ತಾಲೂಕಿನ ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಮೆರವಣಿಗೆ ನಡೆಸುವುದರ ಮೂಲಕ ಶ್ರೀ ಭಗೀರಥ ಮಹರ್ಷಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಜಯಂತಿಯ ಹಿನ್ನೆಲೆ ಗ್ರಾಮದ ಶ್ರೀ ಭಗೀರಥ ಮಹರ್ಷಿ ನಾಮಫಲಕವನ್ನು ಪುಷ್ಪದಿಂದ ಸಿಂಗರಿಸಲಾಗಿದ್ದು, ಯಜಮಾನರು ಹಾಗೂ ಮುಖಂಡರು ಜತೆಗೂಡಿ ಪುಷ್ಪನಮನವನ್ನು ಸಲ್ಲಿಸಿ ಪೂಜೆ ನೆರವೇರಿಸಿದರು. ಬಳಿಕ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದ್ದ ತೆರೆದ ವಾಹನದಲ್ಲಿ ಶ್ರೀಗಳ ಭಾವಚಿತ್ರವನ್ನು ಕೂರಿಸಿ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಭಗೀರಥ ಮಹರ್ಷಿಗಳ ಬಗ್ಗೆ ಜೈಕಾರ ಮೊಳಗಿದವು. ಯುವಕರು ಉತ್ಸಾಹದಿಂದ ತಮಟೆ ಹಾಗೂ ವಾದ್ಯದ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಈ ಮೂಲಕ ಗ್ರಾಮದಲ್ಲಿ ಶ್ರೀ ಭಗೀರಥ ಮಹರ್ಷಿ ಜಯಂತಿ ವಿಜೃಂಭಣೆಯಿಂದ ಜರುಗಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.

ದೇವಗಂಗೆಯನ್ನು ಧರೆಗಿಳಿಸಿದ ತ್ರಿವಿಕ್ರಮ:

ಮೆರವಣಿಗೆ ಚಾಲನೆ ನೀಡಿ ಮಾತನಾಡಿದ ಗ್ರಾಮದ ಮುಖಂಡ ಮಾದೇವ, ಭಗೀರಥ ಮಹರ್ಷಿಗಳು ಅವಿರತ ಪ್ರಯತ್ನದ ಶ್ರಮದಿಂದ ದೇವಗಂಗೆಯನ್ನು ಧರೆಗಿಳಿಸಿದ ಛಲ ಬಿಡದ ತ್ರಿವಿಕ್ರಮ. ವಸಂತ ಋತುವಿನ ವೈಶಾಖ ಮಾಸದ ಸಪ್ತಮಿಯಂದು ದೇವಗಂಗೆ ಧರೆಗೆ ಬಂದ ದಿನವನ್ನು ಪ್ರತಿ ವರ್ಷ ಗಂಗಾ ಸಪ್ತಮಿ ಎಂದು ಕರೆಯುತ್ತೇವೆ. ಈ ದಿನದಂದೇ ಭಗಿರಥ ಜಯಂತಿಯನ್ನು ಆಚರಿಸಲಾಗುತ್ತದೆ. ಆದರೆ, ಕೆಲ ಕಾರಣಾಂತರದಿಂದ ಶ್ರೀಗಳ ಜಯಂತಿಯನ್ನು ಗ್ರಾಮದಲ್ಲಿ ಇದೀಗ ಆಚರಿಸಲಾಗುತ್ತಿದೆ. ಭಗೀರಥ ಮಹರ್ಷಿಗಳು ಮಹಾರಾಜರಾಗಿದ್ದು, ಸಕಲ ವೈಭವಗಳಿದ್ದರೂ ದೇವಗಂಗೆಯನ್ನು ಪಡೆಯಬೇಕು ಎನ್ನುವ ತಂದೆ ಹಾಗೂ ತಾತಂದಿರ ಆಸೆಯನ್ನು ಈಡೇರಿಸಲಾಗಲಿಲ್ಲ. ಇದರಿಂದ ಪ್ರತಿಜ್ಞೆ ಮಾಡಿದ ಮಹರ್ಷಿಗಳು ಘೋರ ತಪಸ್ಸು ಮಾಡಿ ಸ್ವರ್ಗದಿಂದ ದೇವಗಂಗೆಯನ್ನು ಧರೆಗಿಳಿಸುವುದರ ಮೂಲ ಪಿತೃಗಳಿಗೆ ಸ್ವರ್ಗ ದೊರಕಿಸಿಕೊಟ್ಟರು. ಹಾಗಾಗಿ, ಇವರ ಸಾಧನೆ ಅಸಾಮಾನ್ಯ. ಇವರ ಆದರ್ಶಗಳು ಸಾಧಕರಿಗೆ ಸ್ಫೂರ್ತಿದಾಯಕವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಇವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಜತೆಗೆ ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದರ ಮೂಲಕ ಸಮಾಜದ ಅಭಿವೃದ್ಧಿಗೆ ಗಮನಹರಿಸಬೇಕು. ಇದರಿಂದ ಸಮುದಾಯವು ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.

ಯಜಮಾನರಾದ ದಾಸಶೆಟ್ಟಿ, ಮಾದೇವಶೆಟ್ಟಿ, ಮುಖಂಡರಾದ ಸೋಮಣ್ಣ, ಮಣಿ, ಗಿರೀಶ್, ಕೃಷ್ಣ, ಸುರೇಶ್, ಮಾದೇಶ್, ದರ್ಶನ್, ಸೋಮು, ಕೃಷ್ಣಪ್ಪ, ಕುಮಾರ್, ನಂದೀಶ್, ರಮೇಶ, ವೆಂಕಟರಾಜು ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net