

ಶಿರಸಿ: ಯುವಕರಲ್ಲಿ ಕೃಷಿ ಆಸಕ್ತಿ ಬೆಳೆಸುವ ಮತ್ತು ಸಾಂಪ್ರದಾಯಿಕ ಭತ್ತದ ತಳಿ ಉಳಿಸಲು ಉತ್ತೇಜಿಸುವ ಸಲುವಾಗಿ ನಗರದ ಸ್ಕೂಡ್ವೇಸ್ ಸಂಸ್ಥೆ ಹಾಗೂ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ನಾಟಿ ಹಬ್ಬ ತಾಲೂಕಿನ ಉಂಚಳ್ಳಿಯಲ್ಲಿ ಶನಿವಾರ ನಡೆಯಿತು. ಇದುವರೆಗೂ ಹೊಲಕ್ಕಿಳಿಯದ ಅನೇಕ ಯುವಕ-ಯುವತಿಯರು ಭತ್ತದ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಸಂಭ್ರಮಿಸಿದರು.
ಕಾಲ ಬದಲಾಗಿದೆ, ಕೃಷಿ ವಿಧಾನಗಳೂ ಬದಲಾಗಿವೆ. ಆದರೆ, ಹಿಂದಿನ ಕೃಷಿ ಪದ್ಧತಿ ಯಾವ ರೀತಿ ಇರುತ್ತಿತ್ತು ಎಂಬುದನ್ನು ಕಾರ್ಯಕ್ರಮದಲ್ಲಿ ಯುವ ಜನತೆಗೆ ಪರಿಚಯಿಸಲಾಯಿತು. ಭತ್ತದ ಗದ್ದೆಗೆ ಇಳಿಯುವ ಮುನ್ನ ಜೇನು ನೆಲ್ಲಿ ಕಾಯಿ ಸವಿಯುವ ಮೂಲಕ ಆರಂಭಿಸಿ ಬಳಿಕ ತಂಡವಾಗಿ ಭತ್ತದ ಗದ್ದೆಗೆ ತೆರಳಿ ಅಲ್ಲಿ ನೇಗಿಲು ಪೂಜೆ, ಗೋ ಗ್ರಾಸ, ಅಗೆ ಪೂಜೆ ನೆರವೇರಿಸಲಾಯಿತು. ಬಳಿಕ ಎಲ್ಲರೂ ಭತ್ತದ ಗದ್ದೆಗೆ ಇಳಿದು ನಾಟಿ ಕಾರ್ಯ ನೆರವೇರಿಸಿದರು.
ಈ ವೇಳೆ ಮಾತನಾಡಿದ ಸ್ಕೂಡ್ವೇಸ್ ಸಂಸ್ಥೆಯ ಡಾ. ವೆಂಕಟೇಶ ನಾಯ್ಕ, ವಿವಿಧ ಹಳ್ಳಿಗಳಿಂದ ರೈತರು, ಸ್ವ ಸಹಾಯ ಸಂಘಗಳು, ಪ್ರಗತಿಪರ ರೈತರು ನಾಟಿ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಸ್ಕೂಡ್ವೇಸ್ ಸಂಸ್ಥೆ ಈಗಾಗಲೇ 22 ಅಪರೂಪದ ತಳಿಗಳ ಭತ್ತದ ಗಿಡಗಳನ್ನು ಉಂಚಳ್ಳಿಯಲ್ಲಿ ಬೆಳೆಯುತ್ತಿದೆ. ಈ ತಳಿಯ ಗಿಡಗಳನ್ನೇ ನಾಟಿ ಹಬ್ಬದಲ್ಲಿ ನಾಟಿ ಮಾಡಲಾಗಿದೆ. ಮೈಸೂರು ಕಗ್ಗ, ಗಜಮಿನಿ, ಶೋಭಿನಿ, ರಾಜಮುಡಿ, ಮಂಜುಗುಣಿ ಸಣ್ಣದಂತಹ 72 ತಳಿಗಳನ್ನು ನಾವು ನಾಟಿ ಮಾಡಿದ್ದೇವೆ. ಈ ನಾಟಿ ಹಬ್ಬದ ಮೂಲಕ 1200 ಕೆಜಿ ಭತ್ತ ಉತ್ಪಾದಿಸುವ ಗುರಿ ಹೊಂದಿದ್ದು, ಈ ಬೀಜಗಳ ಸಂರಕ್ಷಣೆಯ ಸಲುವಾಗಿ ರೈತರಿಗೆ ವಿತರಣೆ ಮಾಡಲಿದ್ದೇವೆ. ರೈತರು ಈ ತಳಿಗಳನ್ನು ಅಭಿವೃದ್ಧಿಪಡಿಸಿದ ಬಳಿಕ ಸ್ಕೂಡ್ವೇಸ್ ಸಂಸ್ಥೆಯೇ ಪುನಃ ಖರೀದಿಸಲಿದೆ ಎಂದರು.
ಕೃಷಿ ಇಲಾಖೆ ನಿರ್ದೇಶಕ ಟಿ.ಎಚ್. ನಟರಾಜ ಮಾತನಾಡಿ, ಕೃಷಿ ಇಲಾಖೆ ಶೂನ್ಯ ಬಂಡವಾಳ ಕೃಷಿಗೆ ಸದಾ ಉತ್ತೇಜನ ನೀಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 75ಕ್ಕೂ ಅಧಿಕ ರೈತರು ಸಾವಯವ ಮಾದರಿಯಲ್ಲಿಯೇ ಕೃಷಿ ನಡೆಸುತ್ತಿದ್ದಾರೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ರೂಪಾ ಪಾಟೀಲ, ಪ್ರಮುಖರಾದ ಕೆ.ವಿ. ಕೂರ್ಸೆ, ಕೆ.ಎನ್. ಹೊಸ್ಮನಿ, ಸರಸ್ವತಿ ಎನ್. ರವಿ, ಪತ್ರಕರ್ತ ಜಿ.ಸು. ಭಟ್ ಬಕ್ಕಳ ಇತರರಿದ್ದರು.