

ಕೊಳ್ಳೇಗಾಲ: ತಾಲೂಕಿನ ಸಿಂಗನಲ್ಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಕಲಿಕಾ ಹಬ್ಬವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಸಿಂಗನಲ್ಲೂರು ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ, ಬಿಆರ್‌ಸಿ ಮಹದೇವ ಕುಮಾರ್ ಚಾಲನೆ ನೀಡಿದರು. ಕಾಮಗೆರೆ ಕ್ಲಸ್ಟರ್ ವ್ಯಾಪ್ತಿಯ ಸಿಂಗನಲ್ಲೂರು, ಬೂದಬಾಳು, ಲಕ್ಕರಸನಪಾಳ್ಯ, ಕೆಂಪನಪಾಳ್ಯ, ಕಂಚಗಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುವ 1ರಿಂದ 5ನೇ ತರಗತಿ ವ್ಯಾಸಂಗ ಮಾಡುವ ಮಕ್ಕಳಿಗೆ ಕಲಿಕಾ ದೃಷ್ಟಿಯಿಂದ ಕಥೆ ಹೇಳುವುದು, ರಸ ಪ್ರಶ್ನೆ ಕಾರ್ಯಕ್ರಮ, ಗಟ್ಟಿ ಓದು, ಜ್ಞಾಪಕ ಶಕ್ತಿ ಪರೀಕ್ಷೆ, ಸಂತಸ ಗಾಯಕ ಗಣಿತ, ಕೈಬರಹ ಮತ್ತು ಕ್ಯಾಲಿಗ್ರಫಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಸಿಂಗನಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಸಿದ್ದೇಶ್ ಕುಮಾರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸ್ಟೀವನ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ರಾಜಮ್ಮ, ಸಿಆರ್‌ಪಿ ಮಹದೇವ, ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಶೋಭಾ, ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಲಿಂಗರಾಜು ಇತರರು ಇದ್ದರು.