

ಮಡಿಕೇರಿ: ಕೈಲ್ ಮುಹೂರ್ತ ಹಬ್ಬವನ್ನು ಸಾಂಪ್ರದಾಯಿಕವಾಗಿ ಕೊಡಗು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಕೃಷಿ ಚಟುವಟಿಕೆಯಲ್ಲಿ ತೊಡಗಿ ನಾಟಿಕಾರ್ಯ ಮುಗಿಸಿದ್ದ ರೈತರು, ಕೃಷಿ ಪರಿಕರ ಮತ್ತು ಕೊಡಗಿನ ಸಾಂಪ್ರದಾಯಿಕ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಕೈಲ್ ಮುಹೂರ್ತ ಹಬ್ಬದಲ್ಲಿ ಕೋವಿ ಪೂಜಿಸಲು ತೋಕುಪೂ ಬಳಸುವುದು ವಿಶೇಷವಾಗಿದೆ. ತೋಕು ಎಂದರೆ ಕೋವಿ, ಪೂ ಎಂದರೆ ಹೂವು ಎಂದರ್ಥ. ಕಾಡುಗಳಲ್ಲಿ ಬೆಳೆಯುವ ಸುಂದರವಾದ ಈ ಹೂವು ಕೈಲು ಮುಹೂರ್ತ ಹಬ್ಬದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಈ ಹೂವನ್ನು ಕಾಡಿನಿಂದ ತಂದು ಕೋವಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕೈಲ್ ಮುಹೂರ್ತ ಹಬ್ಬದ ನಂತರ ಕತ್ತಿ, ಕೋವಿಗಳು ಬಳಕೆಯಾದರೆ ಅಲ್ಲಿಯವರೆಗೆ ವ್ಯವಸಾಯದಲ್ಲಿ ಬಳಕೆಯಾದ ನೇಗಿಲು, ನೊಗ ಇತ್ಯಾದಿ ಉಪಕರಣಗಳಿಗೆ ವಿರಾಮ ದೊರೆಯುತ್ತದೆ. ಈ ಎಲ್ಲಾ ಉಪಕರಣ ತೊಳೆದು ಪೂಜೆ ಸಲ್ಲಿಸಲಾಯಿತು. ಉಳುಮೆ ಮಾಡಿದ ಎತ್ತುಗಳ ಮೈ ತೊಳೆದು ಅವುಗಳಿಗೆ ಕುಂಕುಮ, ಗಂಧ ಹಚ್ಚಿ ಅಲಂಕರಿಸಲಾಗಿತ್ತು. ಕೈಲು ಮುಹೂರ್ತ ಹಬ್ಬದ ವಿಶೇಷವಾಗಿರುವ ಕಡಂಬಿಟ್ಟು ಹಾಗೂ ಹಂದಿ ಮಾಂಸದ ಊಟ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸೇವಿಸಿದರು.
ವಿಶೇಷ ಖಾದ್ಯದ ಊಟದ ಬಳಿಕ ಎಲ್ಲರೂ ಊರ್ ಮಂದ್‌ನಲ್ಲಿ ಸೇರಿ ಅಲ್ಲಿ ಕೋವಿಯ ಮೂಲಕ ತೆಂಗಿನ ಕಾಯಿಗೆ ಗುಂಡು ಹಾರಿಸಿ ಹಬ್ಬ ಆಚರಿಸಲಾಯಿತು. ಮರದ ತುದಿಗೆ ತೆಂಗಿನಕಾಯಿ ಕಟ್ಟಿ ಅದಕ್ಕೆ ಗುಂಡು ಹೊಡೆಯುವುದು ವಾಡಿಕೆ ಮತ್ತು ಇದು ಜನಪದೀಯ ಕ್ರೀಡೆಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಹಬ್ಬದ ಬಹುತೇಕ ಆಚರಣೆಗಳು ಮರೆಯಾಗಿವೆಯಾದರೂ ಹಿರಿಯರು ಯುವ ಸಮೂಹದಲ್ಲಿ ಕೊಡಗಿನ ಹಬ್ಬ, ಸಂಸ್ಕೃತಿಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.