

ಮಡಿಕೇರಿ: ಕೈಲ್ ಮುಹೂರ್ತ ಹಬ್ಬವನ್ನು ಸಾಂಪ್ರದಾಯಿಕವಾಗಿ ಕೊಡಗು ಜಿಲ್ಲೆಯಾದ್ಯಂತ ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು.
ಕೃಷಿ ಚಟುವಟಿಕೆಯಲ್ಲಿ ತೊಡಗಿ ನಾಟಿಕಾರ್ಯ ಮುಗಿಸಿದ್ದ ರೈತರು, ಕೃಷಿ ಪರಿಕರ ಮತ್ತು ಕೊಡಗಿನ ಸಾಂಪ್ರದಾಯಿಕ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕೈಲ್ ಮುಹೂರ್ತ ಹಬ್ಬದಲ್ಲಿ ಕೋವಿ ಪೂಜಿಸಲು ’ತೋಕುಪೂ’ ಬಳಸುವುದು ವಿಶೇಷವಾಗಿದೆ. ತೋಕು ಎಂದರೆ ಕೋವಿ, ಪೂ ಎಂದರೆ ಹೂವು ಎಂದರ್ಥ. ಕಾಡುಗಳಲ್ಲಿ ಬೆಳೆಯುವ ಸುಂದರವಾದ ಈ ಹೂವು ಕೈಲು ಮುಹೂರ್ತ ಹಬ್ಬದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಈ ಹೂವನ್ನು ಕಾಡಿನಿಂದ ತಂದು ಕೋವಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.