

ಉಡುಪಿ: ಯೇಸು ಕ್ರಿಸ್ತರು ತಮ್ಮ ಶ್ಡಿರೊಂದಿಗೆ ನಡೆಸಿದ ಕೊನೆಯ ಭೋಜನ ಹಾಗೂ ಕೆಸ್ತ ಧರ್ಮಸಭೆಯ ಉಗಮದ ಸ್ಮರಣಾರ್ಥ ಪವಿತ್ರ ಗುರುವಾರದ ಆಚರಣೆ ಜಿಲ್ಲೆಯಾದ್ಯಂತ ನಡೆಯಿತು.
ಉಡುಪಿ ಧರ್ಮಪ್ರಾಂತ್ಯದ ಧಮಾರ್ಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್ ಚರ್ಚ್ನಲ್ಲಿ ಧರ್ಮಪಾಂತ್ಯದ ಪ್ರಧಾನ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಬಲಿಪೂಜೆಯ ವೇಳೆ ಧಮಾರ್ಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ 12 ಮಂದಿ ಪ್ರೇಷಿತರ ಪಾದಗಳನ್ನು ತೊಳೆಯುವ ಮೂಲಕ ಏಸುಕ್ರಿಸ್ತರು ಸಾರಿದ ದೀನತೆ ಹಾಗೂ ಪ್ರೀತಿಯ ಸಂದೇಶವನ್ನು ನೀಡಿದರು.
ಚರ್ಚಿನ ಪ್ರಧಾನ ಧರ್ಮಗುರು ಹಾಗೂ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯ ಧರ್ಮಗುರು ವಂ. ಪ್ರದಿಪ್ ಕಾರ್ಡೊಜಾ, ವಂ. ಡಾಣಜೆನ್ಸಿಲ್ ಆಲ್ವಾ, ಧರ್ಮಪ್ರಾಂತ್ಯದ ಕುಲಪತಿ ವಂ. ಸ್ಟೀಫನ್ ಡಿಸೋಜಾ, ಕಟಪಾಡಿ ಹೋಲಿ ಕ್ರೊಸ್ ಸಂಸ್ಥೆಯ ನಿರ್ದೇಶಕ ವಂ. ರೋನ್ಸನ್ ಡಿಸೋಜಾ, ಪಿಲಾರ್ ಫಾದರ್ಸ್ ಸಂಸ್ಥೆಯ ನಿರ್ದೇಶಕ ವಂ. ಮನೋಜ್ ಫುರ್ಟಾಡೊ ಉಪಸ್ಥಿತರಿದ್ದರು. ಪವಿತ್ರ ಗುರುವಾರದ ಅಂಗವಾಗಿ ಚರ್ಚ್ಗಳಲ್ಲಿ ಪರಮ ಪ್ರಸಾದ ಸಂಸ್ಕಾರ, ಗುರು ದೀಕ್ಷೆಯ ಸಂಸ್ಕಾರ, ಸೇವೆಯ ಸಂಸ್ಕಾರದ ಸ್ಮರಣೆಯೊಂದಿಗೆ ವಿಶೇಷ ಪ್ರಾರ್ಥನೆ, ಬಲಿಪೂಜೆ, ಆರಾಧನೆಗಳು ಜರುಗಿದವು. ಶುಕ್ರವಾರ ಯೇಸುವನ್ನು ಶಿಲುಬೆಗೇರಿಸಿದ ದಿನವಾವಾಗಿದ್ದು, ಕೆಸ್ತರು ಶುಭ ಶುಕ್ರವಾರ (ಗುಡ್ ಫ್ರೈಡೆ)ವಾಗಿ ಆಚರಿಸಲಿದ್ದಾರೆ.
ಪವಿತ್ರ ಗುರುವಾರ ಆಚರಣೆ
ಜಿಲ್ಲೆಯ ವಿವಿಧ ಚರ್ಚುಗಳಲ್ಲಿ ಆಯಾ ಚರ್ಚುಗಳ ಧರ್ಮಗುರುಗಳ ನೇತೃತ್ವದಲ್ಲಿ ಪವಿತ್ರ ಗುರುವಾರದ ಬಲಿಪೂಜೆ ಹಾಗೂ 12 ಮಂದಿ ಪ್ರೇಷಿತರ ಪಾದಗಳನ್ನು ತೊಳೆಯುವ ವಿಧಿ ವಿಧಾನಗಳು ಜರುಗಿದವು. ಉಡುಪಿ ಶೋಕಮಾತಾ ಚರ್ಚಿನಲ್ಲಿ ಧರ್ಮಗುರು ವಂ. ಚಾರ್ಲ್ಸ್ ಮಿನೇಜಸ್, ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ವಂ. ಡೆನಿಸ್ ಡೆಸಾ, ಕುಂದಾಪುರ ಹೋಲಿ ರೋಸರಿ ಚರ್ಚಿನಲ್ಲಿ ವಂ. ಪಾವ್ಲ್ ರೇಗೊ, ಶಿರ್ವ ಆರೋಗ್ಯ ಮಾತಾ ಚರ್ಚಿನಲ್ಲಿ ವಂ. ಡಾ. ಲೆಸ್ಲಿ ಡಿಸೋಜಾ, ಕಾರ್ಕಳ ಸಂತ ಲಾರೇನ್ಸ್ ಬಸಿಲಿಕಾದಲ್ಲಿ ವಂ. ಆಲ್ಬನ್ ಡಿಸೋಜಾ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.