

ಕೆ.ಆರ್.ಪೇಟೆ: ಪಟ್ಟಣದ ಹೊಸಹೊಳಲಿನಲ್ಲಿ ಕುರುಹಿನಶೆಟ್ಟಿ ಸಮಾಜದಿಂದ ಭಾನುವಾರ ಹನುಮಂತೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಸಮಾಜ ಸೇವಕ ಮಲ್ಲಿಕಾರ್ಜುನ ಚಾಲನೆ ನೀಡಿದರು. ಶ್ರೀರಾಮನ ಪಟ್ಟಾಭಿಷೇಕ ಮಹೋತ್ಸವ ಅಂಗವಾಗಿ 15 ದಿನಗಳಿಂದ ರಾಮಮಂದಿರದಲ್ಲಿ ಪೂಜಾ ಕಾರ್ಯಕ್ರಮ ನಡೆದಿತ್ತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಉತ್ಸವವನ್ನು ಮೆರವಣಿಗೆ ಮಾಡಲಾಯಿತು. ಇದರೊಂದಿಗೆ ಹನುಮಂತ ದೇವರ ವಿಗ್ರಹವನ್ನೂ ಮೆರವಣಿಗೆ ಮಾಡಲಾಯಿತು.
ಕೇರಳದ ಚೆಂಡೆವಾದ್ಯ, ಮಡಿಕೇರಿಯ ಡಿಜೆ ಮ್ಯೂಸಿಕ್, ಲಕ್ಷ್ಮೀಸಾಗರದ ನಾಸಿಕ್ ಬ್ಯಾಂಡ್ ಮತ್ತು ಪಿಯಾನೋ, ತಮಟೆ ವಾದ್ಯ, ಹುಲಿ ವೇಷಧಾರಿಗಳು, ಪಾಳೆಗಿರಿ ವೇಷಧಾರಿಗಳು, ವಿವಿಧ ರೀತಿಯ ಮುಸುಕು ವೇಷ ತೊಟ್ಟ ಯುವಕರು ಸಾರ್ವಜನಿಕರನ್ನು ರಂಜಿಸಿದರು. ಡಿಜೆ ಸಾಂಗ್ಸ್‌ಗೆ ಯುವಕರು-ಯುವತಿಯರು ಕುಣಿದು ಕುಪ್ಪಳಿಸಿದರು. ಬಾಣ, ಬಿರುಸು ಬಾನಂಗಳದಲ್ಲಿ ಚಿತ್ತಾರ ಮೂಡಿಸಿತು.
ಆಸರೆ ಟ್ರಸ್ಟ್ ಅಧ್ಯಕ್ಷ ಎ.ಎಂ.ಬಸವರಾಜು, ಪುರಸಭೆ ಮಾಜಿ ಅಧ್ಯಕ್ಷ ನಟರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್.ಲೋಕೇಶ್, ಸದಸ್ಯರಾದ ಗಾಯತ್ರಿ ಸುಬ್ಬಣ್ಣ, ಪ್ರವೀಣ್ ಕುಮಾರ್, ಸಹಕಾರ ಬ್ಯಾಂಕ್ ಸೊಸೈಟಿ ಅಧ್ಯಕ್ಷ ಮಂಜುನಾಥ್, ಸಮಾಜದ ಮುಖಂಡರಾದ ಜಿ.ಸೋಮಶೇಖರ್, ಆರ್‌ಎಸ್‌ಎಸ್ ಮಂಜುನಾಥ್, ಹನುಮಂತಶೆಟ್ಟಿ, ಲಾರಿ ಮಂಜುನಾಥ್, ಪುಟ್ಟರಾಜು, ಸಮಾಜಸೇವಕ ಆರ್.ಸೋಮಶೇಖರ್, ಉದ್ಯಮಿ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.