

ಅರಕಲಗೂಡು : ಪಟ್ಟಣದ ಐತಿಹಾಸಿಕ ಗಣಪತಿ ಕೊತ್ತಲು ಉದ್ಯಾನದಲ್ಲಿ ಪ್ರಸನ್ನ ಗಣಪತಿ ಸೇವಾ ಸಮಿತಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ಶುಕ್ರವಾರ ಸಡಗರ ಸಂಭ್ರಮಗಳಿಂದ ನೆರವೇರಿತು.
ಕಳೆದ 21 ದಿನಗಳ ಕಾಲ ನಡೆದ ಗಣೇಶೊತ್ಸವದಲ್ಲಿ ವಿವಿಧ ಪೂಜಾ ಕಾರ್ಯಗಳು ಹಾಗೂ ಮನರಂಜನಾ ಕಾರ್ಯಗಳನ್ನು ಆಯೋಜಿಸಲಾಗಿತ್ತು. ನಿತ್ಯ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ನಡಡಯಿತು. ಶುಕ್ರವಾರ ಗಣಪತಿ ವಿಸರ್ಜನೆಗೆ ಮುನ್ನ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಬಳಿಕ ಅಲಂಕರಿಸಿದ ಮಂಟಪದಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕೀಲುಕುದುರೆ, ಗಾರುಡಿ ಗೊಂಬೆ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಹಾಗೂ ಸ್ತಬ್ದ ಚಿತ್ರಗಳು ಮೆರವಣಿಗೆಗೆ ಮೆರುಗು ನೀಡಿದವು.
ರಸ್ತೆಯ ಎರಡೂ ಬದಿಗಳಲ್ಲಿ ಜಮಾಯಿಸಿದ್ದ ಜನರು ಕಲಾ ತಂಡಗಳ ಪ್ರದರ್ಶನ ವೀಕ್ಷಿಸಿ ಗಣಪತಿಗೆ ಹಣ್ಣು, ಕಾಯಿ ಸಮರ್ಪಿಸಿದರು. ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಪ್ರಮುಖರು ಹಾಗೂ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಡ್ಡರಹಳ್ಳಿ ಹೇಮಾವತಿ ಬಲದಂಡೆ ನಾಲೆಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಬಿಗಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿತ್ತು.