

ವಿಜಯಪುರ: ಹಲವಾರು ವರ್ಷಗಳಿಂದ ಸಂಸ್ಥೆಯಲ್ಲಿ ರಂಜಾನ್, ದೀಪಾವಳಿ ಸೇರಿ ಎಲ್ಲ ಧರ್ಮಗಳ ಹಬ್ಬ ಆಚರಿಸಲಾಗುತ್ತಿದ್ದು, ನಾವೆಲ್ಲರೂ ಭಾರತೀಯರು ಎಂಬುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಫಾದರ್ ಟಿಯೋಲ ಮಾಚಾದೊ ಹೇಳಿದರು.
ನಗರದ ಸಂತ ಅನ್ನಮ್ಮನವರ ದೇವಾಲಯದಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆ ಜನ ವೇದಿಕೆ, ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ ಹಾಗೂ ನಗರ ಸ್ಲಂ ಮಹಿಳಾ ಸ್ವ-ಸಹಾಯ ಸಂಘದ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಇಫ್ತಾರ್ ಕೂಟದಲ್ಲಿ ಅವರು ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಫಾದರ್ ರಾಬರ್ಟ್ ಮಿರಂದಾ, ಮನಗೂಳಿ ವಿರಕ್ತಮಠದ ವೀರಾತಿಶಾನಂದ ಸ್ವಾಮೀಜಿ ಹಾಗೂ ಖಾಜಾ ಅಮೀನ ದರ್ಗಾದ ಮಹ್ಮದ್ ಗೇಸು ದರಾಜ ಹುಸೇನಿ ಶಜ್ಞಾದ ನಸೀನ್ ವ ಮುತವಲ್ಲಿ ಮಾತನಾಡಿ, ನಾವೆಲ್ಲ ಭಾರತೀಯರು. ಪರಸ್ಪರ ಪ್ರೀತಿ ಸಹಬಾಳ್ವೆ ಜಾತಿ, ಮತ ಬೇಧವಿಲ್ಲದೆ ಬಾಳಬೇಕೆಂದು ಸಲಹೆ ನೀಡಿದರು.
ಸಂವಿಧಾನ ಪೀಠಿಕೆ ಓದುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಗರದ ವಿವಿಧ ಸ್ಲಂ ಮತ್ತು ಮಹಿಳಾ ಸ್ವ-ಸಹಾಯ ಸಂಘದ 500ಕ್ಕೂ ಅಧಿಕ ಸದಸ್ಯರು ಭಾಗವಹಿಸಿದ್ದರು. ರೇಣುಕಾ ಕೋಟ್ಯಾಳ ಸ್ವಾಗತಿಸಿ, ನಿರೂಪಿಸಿದರು. ರವಿ ದೊಡಮನಿ ವಂದಿಸಿದರು.
ಫಾದರ್ ಜೋಸೆಫ್ ವಾಜ ಮೊಂತೊರೊ, ಸಿಸ್ಟರ್ ಜಯಾ, ರಾಜೇಶ್ವರಿ ಮಠಪತಿ, ಪರ್ಜಾನಾ ಜಮಾದಾರ, ಅಕ್ರಂ ಮಾಶ್ಯಾಳಕರ ಮತ್ತಿತರರಿದ್ದರು.