ಜಿಲ್ಲೆಯ ವಿವಿಧೆಡೆ ಸಂಭ್ರಮದ ಬಕ್ರಿದ್ ಆಚರಣೆ

bakridh
Published on

ಮಡಿಕೇರಿ: ತ್ಯಾಗ, ಬಲಿದಾನದ ಸಂತೇಕವಾದ ಬಕ್ರೀದ್ ಅನ್ನು ನಗರ ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ಮುಸ್ಲಿಂ ಸಮುದಾಯದ ಕೆಲವು ಪಂಗಡಗಳು ಭಕ್ತಿಭಾವದಿಂದ ಸಂಭ್ರಮದಿಂದ ಆಚರಿಸಿದರು.


ನಗರದ ಜಾಮೀಯಾ ಮಸೀದಿ, ಬದ್ರಿಯಾ ಮಸೀದಿ, ಬಟ್ಕಳ್ ಮಸೀದಿ, ಎಂ.ಎಂ ಮಸೀದಿ, ಮಕ್ಕಾ ಮಸೀದಿ, ಮದೀನಾ ಮಸೀದಿ, ಲಸ್ಕರ್ ಮಸೀದಿಗಳಲ್ಲಿ ಮುಸ್ಲಿಮರು ಹೊಸಬಟ್ಟೆ ತೊಟ್ಟು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪುಟ್ಟ ಮಕ್ಕಳು ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಂಡರು. ಬಳಿಕ ಮನೆಯಲ್ಲಿ ಸಿಹಿ ಹಾಗೂ ಮಾಂಸದ ಅಡುಗೆ ಮಾಡಿ ಸೇವಿಸಿದರು.


ಪರಸ್ಪರ ಪ್ರೀತಿ, ಸೌಹಾರ್ದದ ವಕ್ತಾರರಾಗಿ: ಪ್ರವಾದಿ ಇಬ್ರಾಹಿಂ ಹಾಗೂ ಅವರ ಕುಟುಂಬದ ತ್ಯಾಗೋಜ್ವಲ ಜೀವನದ ಸ್ಮರಣೆಗಾಗಿ ವಿಶ್ವದಾದ್ಯಂತ ಎಲ್ಲಾ ವಿಶ್ವಾಸಿಗಳು ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಾವು ಪರಸ್ಪರ ಪ್ರೀತಿ, ಸೌಹಾರ್ದದ ವಕ್ತಾರರಾಗಬೇಕೆಂದು ಪ್ರಮುಖರಾದ ಉಮ್ಮರ್ ಮೌಲವಿಯವರು ತಿಳಿಸಿದರು.


ಮಡಿಕೇರಿಯ ಬದ್ರಿಯಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂದು ಪ್ರವಾದಿ ಇಬ್ರಾಹೀಮರು ಅಲ್ಲಾಹನ ಆದೇಶದಂತೆ ತನ್ನ ಪ್ರೀತಿಯ ಪುತ್ರನ ಬಲಿಯನ್ನು ಅರ್ಪಿಸಲು ಸಿದ್ದರಾದರು. ಅದೇ ರೀತಿ ನಮಗೆ ಪ್ರೀತಿ ಇರುವ ವಸ್ತುಗಳನ್ನು ಇನ್ನೊಬ್ಬರಿಗೆ ಧಾನ ಮಾಡುವ ಉತ್ತಮ ಮನಸ್ಸಿನ ಒಡೆಯನಾಗಬೇಕೆಂದರು.


ಪ್ರವಾದಿ ಇಬ್ರಾಹೀಮರು ಸಾರಿದಂತೆ ನಾವೆಲ್ಲರೂ ಒಂದೇ ದೇವನ ದಾಸರು. ನಮ್ಮನ್ನು ಸೃಷ್ಟಿಕರಿಸಿದವನ್ನು ನಾವು ಆರಾಧಿಸಬೇಕು. ನಮ್ಮ ಜೀವನ, ನಮ್ಮ ಪ್ರಾರ್ಥನೆ, ಕೊನೆಗೆ ನಮ್ಮ ಮರಣವು ಅಲ್ಲಾಹನಿಗೆ ಮೀಸಲಾಗಬೇಕೆಂಬ ಕರೆಯನ್ನು ಪಾಲಿಸಬೇಕು ಎಂದರು.


ಪ್ರಸ್ತುತ ಸಮಾಜದಲ್ಲಿ ಪರಸ್ಪರ ದ್ವೇಷ, ಅಪನಂಬಿಕೆಗಳಿಂದ ಸಮಾಜದಲ್ಲಿ ಅಶಾಂತಿ ತಲೆದೋರಿದೆ. ಇಂತಹ ಸಂದರ್ಭಗಳಲ್ಲಿ ಪ್ರೀತಿ, ಸ್ನೇಹ ಮತ್ತು ಸೌಹಾರ್ದವನ್ನು ಸಂಸ್ಥಾಪಿಸಿ ಉತ್ತಮ ಸಮಾಜವನ್ನು ನಿರ್ಮಿಸಬೇಕೆಂದು ಕರೆ ನೀಡಿದರು.


ನಗರದ ಮಸ್ಜಿದ್ ಉರ್ ರಹ್ಮಾ ಸಿ.ಪಿ.ಸಿ ಲೇಔಟ್ ಕಾಲೇಜು ರಸ್ತೆಯಲ್ಲಿ ನಡೆದ ಈದ್ ನಮಾರ್ ನಂತರ ಮಸೀದಿಯಲ್ಲಿ ನೆರೆದವರಿಗೆ ಮತ್ತು ಆಸುಪಾಸಿನ ಮನೆಗಳಿಗೆ ತೆರಳಿ ಸಿಹಿಯನ್ನು ಹಂಚಿ ಶುಭಹಾರೈಸಿದರು.


ಮಡಿಕೇರಿ ಬದ್ರಿಯಾ ಮಸೀದಿ ಅಬೂಬಕರ್ ಮಾಹಿನ್ ದಾರಿಮಿ, ಎಂ.ಎಂ.ಮಸೀದಿ ಹಮೀದ್ ಮದನಿ, ಅಲಿ ಲತೀಫಿ, ನಸೀಂ ಅಖ್ತರ್ ರಝಾ, ಮಕ್ಕಾ ಮಸೀದಿ ಹಕೀಮ್, ಲೆಸ್ಕರ್ ಮಸೀದಿ ಮೊಹಮ್ಮದ್ ಸಲ್ಮಾನ್, ಮದೀನ ಮೌ ಅಬ್ದುಲ್, ಖಯ್ಯಮ್ ರವರ ನೇತೃತ್ವದಲ್ಲಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net