ಶ್ರೀ ಶಾರದಾ ಪಬ್ಲಿಕ್ ಶಾಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

sharada
ಶ್ರೀ ಶಾರದಾ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಎಂ.ಆರ್.ಸತ್ಯನಾರಾಯಣ ಉದ್ಘಾಟಿಸಿದರು. ಮಂಜುನಾಥ ಶ್ರೀವತ್ಸ, ಶ್ವೇತಾ ಮಂಜುನಾಥ್ ಶ್ರೀವತ್ಸ, ಎಂ.ವಿ.ಶಾಲಿನಿ ಇದ್ದರು.
Published on

ಮೈಸೂರು: ನಮ್ಮ ಭಾವನೆಗಳನ್ನು ಸಮರ್ಥವಾಗಿ ಅಭಿವ್ಯಕ್ತಗೊಳಿಸಲು, ಪರಸ್ಪರ ಪರಿಣಾಮಕಾರಿಯಾದ ಸಂವಹನ ನಡೆಸಲು ತಾಯಿ ನುಡಿ ಕನ್ನಡ ಭಾಷೆಯಿಂದ ಮಾತ್ರ ಸಾಧ್ಯ ಎಂದು ಶ್ರೀ ಶಾರದಾ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಮಂಜುನಾಥ ಶ್ರೀವತ್ಸ ಅಭಿಪ್ರಾಯಪಟ್ಟರು.

ನಗರದ ಶ್ರೀ ಶಾರದಾ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡ ಉದ್ಯೋಗದ ಮತ್ತು ಅನ್ನದ ಭಾಷೆಯಾಗಿ ಬದುಕನ್ನು ಕಾಯುತ್ತದೆ. ಆದ್ದರಿಂದ, ನಾವು ಕನ್ನಡವನ್ನು ಅಭಿಮಾನದಿಂದ ಕಾಯಬೇಕು. ವಿದ್ಯಾರ್ಥಿಗಳು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತಾಗಿ ಗೌರವ ಮತ್ತು ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಪುಸ್ತಕ, ಪತ್ರಿಕೆಗಳನ್ನು ಓದುವ ಹವ್ಯಾಸದಿಂದ ಮತ್ತು ಸಾಹಿತಿಗಳ ಒಡನಾಟದಿಂದ ಕನ್ನಡ ಪ್ರೀತಿ ವೃದ್ಧಿಯಾಗುತ್ತದೆ. ಪರಭಾಷೆಯ ಕುರಿತು ಮೋಹ ಸಲ್ಲದು. ಕನ್ನಡವೇ ನಿತ್ಯದ, ಸತ್ಯದ ಪಥವಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿಜಯವಾಣಿ ಮೈಸೂರು ಬ್ಯುರೋ ಮುಖ್ಯಸ್ಥ ಎಂ.ಆರ್.ಸತ್ಯನಾರಾಯಣ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡ ಪರಿಣಾಮಕಾರಿಯಾಗಿ ನಮ್ಮೊಂದಿಗೆ ಇರಬೇಕು ಎಂದರೆ ಶಾಲಾ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಕಡ್ಡಾಯ ವ್ಯವಸ್ಥೆ ಜಾರಿಯಾಗಬೇಕು. 1 ರಿಂದ 5ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುವ ಶಿಸ್ತುಬದ್ಧ ವ್ಯವಸ್ಥೆ ಜಾರಿಯಾಗಬೇಕು. ಆಗ ಮಾತ್ರ ಕನ್ನಡ ನಾಡಿನಲ್ಲಿ ಕನ್ನಡ ಅಸ್ಮಿತೆ ಉಳಿಯಲು ಸಾಧ್ಯವಾಗುತ್ತದೆ ಎಂದರು.

ಶಾಲಾ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯನ್ನು ತಪ್ಪಾಗಿ ಓದುವ ಮತ್ತು ಬರೆಯುವ ಮನೋಭಾವ ಹೆಚ್ಚು. ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿತು ಸ್ಪಷ್ಟ ಉಚ್ಚಾರಣೆ, ಶುದ್ಧ ಬರಹದ ಮೂಲಕ ಉಳಿಸುವ, ಬೆಳೆಸುವ ಕೆಲಸ ಮಾಡಬೇಕು. ಆ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ಕನ್ನಡವನ್ನು ನಮ್ಮೊಂದಿಗೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯೋತ್ಸವದ ಸಂಭ್ರಮ ನವೆಂಬರ್ ತಿಂಗಳಿಗೆ ಸೀಮಿತವಾಗದೆ ವರ್ಷವಿಡೀ ಆಚರಿಸುವಂತಾಗಬೇಕು ಎಂದರು.

ಇದೇ ವೇಳೆ ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿಯ ಶ್ರೇಷ್ಠತೆಯನ್ನು ತಿಳಿಸುವ ಹೊಯ್ಸಳರ ಚರಿತ್ರೆಯನ್ನು ನೃತ್ಯರೂಪಕದ ಮೂಲಕ ಅತ್ಯದ್ಭುತವಾಗಿ ಪ್ರದರ್ಶಿಸಿದರು. ಕನ್ನಡದ ವೈಭವವನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಟ್ರಸ್ಟಿ ಶ್ವೇತಾ ಮಂಜುನಾಥ್ ಶ್ರೀವತ್ಸ, ಪ್ರಾಂಶುಪಾಲರಾದ ಎಂ.ವಿ.ಶಾಲಿನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net