ಸಾಂಸ್ಕೃತಿಕ ನಗರದಲ್ಲಿ ಸಂಭ್ರಮಾಚರಣೆ

23
Published on

ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ-3’ ನೌಕೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ಹಿನ್ನೆಲೆಯಲ್ಲಿ ನಗರಾದ್ಯಂತ ಬುಧವಾರ ಸಂಭ್ರಮಾಚರಣೆ ನಡೆಯಿತು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸಾಧನೆಗೈದ ಭಾರತದ ವಿಜ್ಞಾನಿಗಳಿಗೆ ಮನದಿಂದಲೇ ಅಭಿನಂದಿಸಿದರು.

ಲ್ಯಾಂಡರ್(ವಿಕ್ರಮ್) ಮತ್ತು ರೋವರ್(ಪ್ರಜ್ಞಾನ್) ಒಳಗೊಂಡ ನೌಕೆ ಸಾಫ್ಟ್ ಲ್ಯಾಂಡಿಂಗ್ ಆಗುತ್ತಿದ್ದಂತೆ ನಗರದ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಂಭ್ರಮಿಸಿದರು. ಸಾರ್ವಜನಿಕರಿಗೆ ಸಿಹಿ ವಿತರಿಸಿ ಖುಷಿಪಟ್ಟರು. ಭಾರತ, ಪ್ರಧಾನಿ ಮೋದಿ, ಇಸ್ರೋ ಪರ ಜೈಕಾರ ಕೂಗಿದರು. ಯಶಸ್ಸಿಗೆ ಕಾರಣರಾದ ಇಸ್ರೋ ವಿಜ್ಞಾನಿಗಳಿಗೆ ಶುಭ ಹಾರೈಸಿದರು.

ನಗರದ ಅಗ್ರಹಾರ ವೃತ್ತ, ಸಯ್ಯಜಿರಾವ್ ರಸ್ತೆ, ದೇವರಾಜ ರಸ್ತೆ ಮೊದಲಾದ ಕಡೆ ಹಲವರು ಸಿಹಿ ವಿತರಿಸಿ ಸಂಭ್ರಮಿಸಿದರು. ಕೆಲವರಂತೂ ತ್ರಿವರ್ಣ ಧ್ವಜವನ್ನು ಅತ್ತಿಂದಿತ್ತ, ಇತ್ತಿಂದಿತ್ತ ಬೀಸಿ ಸಂತಸ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಚಂದ್ರಯಾನ-3ರ ಮಹತ್ವದ ಯಶಸ್ಸು ನಗರದ ಬಹುತೇಕ ಜನತೆ ಸಂಭ್ರಮಿಸುವಂತೆ ಮಾಡಿತು.

ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಸ್ಪರ್ಶ ಮಾಡುವ ನಿರ್ದಿಷ್ಟ ಸಮಯವನ್ನು ಇಸ್ರೋ ಮೊದಲೇ ಪ್ರಕಟಿಸಿತ್ತು. ಜತೆಗೆ, ಅದು ಚಂದ್ರನ ಕಕ್ಷೆಯಿಂದ ಚಂದ್ರನ ನೆಲದ ಮೇಲೆ ಸುಸೂತ್ರವಾಗಿ ಇಳಿಯುವವರೆಗೂ ಕ್ಷಣಕ್ಷಣದ ಗ್ರಾಫಿಕ್ ಹಾಗೂ ವಿಕ್ರಮ್ ಲ್ಯಾಂಡರ್ ಸಹ ಕ್ಷಣಕ್ಷಣಕ್ಕೂ ತೋರಿಸುತ್ತಿದ್ದ ಚಂದ್ರನ ಮೇಲ್ಮೈ ಚಿತ್ರಗಳನ್ನು, ವಿಡಿಯೋಗಳನ್ನು ಪ್ರಸಾರ ಮಾಡುತ್ತಿತ್ತು. ಹೀಗಾಗಿ ಕೊನೆಯ ಅತಿ ಮಹತ್ವದ ಸುಮಾರು ಏಳು ಕಿ.ಮೀ ಎತ್ತರದಿಂದ ಲ್ಯಾಂಡರ್ ಕೆಳಗಿಳಿಯುವವರೆಗೂ ಜನತೆ ತುದಿಗಾಲ ಮೇಲೆ ನಿಂತವರಂತೆ ಕಣ್ಣರಳಿಸಿ ನೋಡುತ್ತಿದ್ದರು. ಇದೇ ವೇಳೆ ಸುದ್ದಿವಾಹಿನಿಗಳು, ಯೂಟ್ಯೂಬ್‌ಗಳು ಇದನ್ನು ಪ್ರಸಾರ ಮಾಡುತ್ತಿದ್ದವು. ಅಲ್ಲದೆ, ಕೆಲ ಪ್ರತಿಷ್ಠಿತ ಶಾಲೆಗಳೂ ತಮ್ಮ ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸಿಕೊಂಡು ನೇರ ಪ್ರಸಾರದ ದೃಶ್ಯಾವಳಿ ತೋರಿಸುವ ಮೂಲಕ ವಿದ್ಯಾರ್ಥಿಗಳ ಕುತೂಹಲ ತಣಿಸಿದವು. ಇದೇ ರೀತಿಯ ಪರಿಸ್ಥಿತಿ ಪ್ರಜ್ಞಾವಂತರು, ವಿಚಾರವಂತರ ಮನೆಗಳಲ್ಲಿಯೂ ಕಂಡುಬಂತು. ಜತೆಗೆ, ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳ ಗ್ರಾಮಾಂತರ ಜನತೆ ಸಹ ಈ ಅಪೂರ್ವ ದೃಶ್ಯಗಳನ್ನು ಕಣ್ತುಂಬಿಕೊಂಡರು.

ವಿದ್ಯಾರ್ಥಿಗಳಂತೂ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ವಿಜ್ಞಾನಿಗಳ ನಿರೀಕ್ಷೆಯಂತೆ ಚಂದ್ರನ ನೆಲ ಸ್ಪರ್ಶ ಮಾಡಿದಾಗ ಕುಣಿದು ಕುಪ್ಪಳಿಸಿದರು. ಇವರೆಲ್ಲರ ಮುಖದಲ್ಲಿ ತಾವೇ ಏನನ್ನೋ ಸಾಧಿಸಿದೆವೆಂಬ ತೃಪ್ತಿಯಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net