ಬರಗಾಲದ ನಡುವೆಯೂ ಆಚರಣೆ

IMG-20231018-WA0423
Published on

ಶ್ರೀರಂಗಪಟ್ಟಣ: ನಾಡಿನ ಪರಂಪರೆ, ಇತಿಹಾಸ ಹಾಗೂ ನಮ್ಮ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವ ದೃಷ್ಟಿಯಿಂದ ದಸರಾ ಆಚರಣೆ ಕೈ ಬಿಡದೆ ಬರಗಾಲದ ನಡುವೆಯೂ ನಡೆಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.


ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ನಾಡಹಬ್ಬ ಶ್ರೀರಂಗಪಟ್ಟಣ ಪಾರಂಪರಿಕ ದಸರೆಯ ಬುಧವಾರ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.


ದಸರಾ ಆಚರಣೆಯ ಮೂಲಸ್ಥಾನ ನಮ್ಮ ಶ್ರೀರಂಗಪಟ್ಟಣ. ಹೀಗಾಗಿ ಇಲ್ಲಿ ನಿಂತುಹೋಗಿದ್ದ ಪಾರಂಪರಿಕ ದಸರೆಯನ್ನು ಮತ್ತೆ ಶ್ರೀೀರಂಗಪಟ್ಟಣದಲ್ಲೇ ನಡೆಸಲು ಶ್ರೀಕಾರ ಹಾಕಿದ್ದು 2006ರಲ್ಲಿ ಅಂದು ಕ್ಷೇತ್ರದ ಶಾಸಕಿಯಾಗಿದ್ದ ಶಾಸಕ ರಮೇಶ ಬಂಡಿಸಿದ್ದೇಗೌಡರ ತಾಯಿ ಮಾಜಿ ಶಾಸಕಿ ವಿಜಯಲಕ್ಷ್ಮಮ್ಮ ಬಂಡಿಸಿದ್ದೇಗೌಡ. ಅವರ ಕಾಲದಲ್ಲಿ ದಸರೆಯನ್ನು ಮುನ್ನೆಲೆಗೆ ತಂದು ಈ ವೈಭವದ ಮರು ನಿರ್ಮಾಣಕ್ಕೆ ಚಾಲನೆ ನೀಡಿರುವುದು ಗಮನಾರ್ಹ ಸಂಗತಿ. ಅನ್ಯ ರಾಜ್ಯಗಳಲ್ಲೂ ನವರಾತ್ರಿಯ ದಸರಾವನ್ನು ಆಚರಿಸಲಾಗುತ್ತಿದ್ದರೂ, ನಮ್ಮ ರಾಜ್ಯ ಸಂಭ್ರಮಾಚರಣೆಯ ಹಬ್ಬವನ್ನಾಗಿ ಪರಿಗಣಿಸಿ, ಪರಂಪರೆಯಾಗಿ ಬಿಂಬಿಸಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.


ಇಲ್ಲಿ ಹಣದ ವಿಚಾರಕ್ಕಿಂತ ನಮ್ಮತನ ಪ್ರಮುಖವಾಗಿದ್ದು ನಾಡಹಬ್ಬ ಶ್ರೀರಂಗಪಟ್ಟಣ ದಸರಾವನ್ನು ಸುಖ-ದುಃಖಗಳ ನಡುವೆ ಮೂರು ದಿನಗಳವರೆಗೆ ಆಚರಿಸಲಾಗಿದೆ. ಈ ಬಾರಿ ರಾಜ್ಯಕ್ಕೆ ಮಳೆ ಕೊರತೆಯಿಂದ ಬರಗಾಲ ಆವರಿಸಿ ರೈತರ ಸಂಕಷ್ಟ ಎದುರಿಸುತ್ತಿರುವುದು ಬೇಸರದ ಸಂಗತಿ. ನಾಡದೇವಿ ಶ್ರೀ ಚಾಮುಂಡೇಶ್ವರಿ ನಮ್ಮನ್ನು ಕಾಪಾಡುತ್ತಾಳೆ ಎಂಬ ನಂಬಿಕೆ ಇದ್ದು, ಶ್ರೀರಂಗಪಟ್ಟಣ ದಸರೆಯಲ್ಲಿ ಭಾಗಿಯಾಗಿರುವುದು ನನಗೆ ಅಪಾರ ಹರ್ಷ ತಂದಿದೆ ಎಂದರು.


ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಕ್ಷೇತ್ರದಲ್ಲಿ ಸುದೀರ್ಘ ರಾಜಕೀಯ ಇತಿಹಾಸ ಕಂಡಿರುವ ಏಕೈಕ ಕುಟುಂಬ ಬಂಡಿಸಿದ್ದೇಗೌಡರ ಕುಟುಂಬ. 8 ಬಾರಿ ಅಧಿಕಾರ ಕಂಡಿರುವ ಕುಟುಂಬವಾದರೂ ಕ್ಷೇತ್ರದ ಜನರೊಂದಿಗೆ ಸಾಮಾನ್ಯರಂತೆ ಸರಳವಾಗಿ ನಡೆದುಕೊಂಡಿದೆ. ಹಾಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಸರ್ಕಾರದ ಸಚಿವರು ಹಾಗೂ ಆಡಳಿತದ ಯಂತ್ರದೊಂದಿಗೆ ಅತ್ಯುತ್ತಮ ಸಂಪರ್ಕವನ್ನಿಟ್ಟುಕೊಂಡು ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಶ್ರಮದಿಂದ ಈ ಮೂರು ದಿನಗಳವರೆಗೆ ನಡೆದ ಶ್ರೀರಂಗಪಟ್ಟಣ ದಸರಾ ನೂರು ದಿನಗಳ ಸಂಭ್ರಮವನ್ನು ನಿಮಗೆ ನೀಡಿರುವುದು ಈ ಯಶಸ್ವಿಗೆ ಸಂಪೂರ್ಣ ಕಾರಣ. ಇದಕ್ಕಾಗಿ ಶ್ರಮಿಸಿದ ಜಿಲ್ಲೆಯ ಅಧಿಕಾರಿಗಳು ಹಾಗೂ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.
ರೈತರ ಹಿತ ಕಾಪಾಡುವಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ. ಮಳೆ ಕೊರತೆ ಹಾಗೂ ಕಾವೇರಿ ನೀರು ವಿವಾದ ಇಷ್ಟೆಲ್ಲ ಸಂಕಷ್ಟಗಳು ಇದ್ದರೂ ದಸರಾ ನಿಲ್ಲಬಾರದು ಎಂದು ಸಾಂಪ್ರದಾಯಿಕವಾಗಿ ಆಚರಿಸಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎ.ಬಿ.ರಮೇಶ ಬಂಡೀಸಿದ್ದೇಗೌಡ ಮಾತನಾಡಿ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಚಿವರು ಸಹಕರಿಸುವಂತೆ ಮನವಿ ಮಾಡಿದರು.


ವಿಧಾನ ಪರಿಷತ್ ಶಾಸಕರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಶೇಕ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net