ಸಿಎನ್‌ಸಿಯಿಂದ ಸಂಭ್ರಮದ ತೋಕ್ ನಮ್ಮೆ ಆಚರಣೆ

MDK03
Published on

ಮಡಿಕೇರಿ: ವಿಶ್ವ ರಾಷ್ಟ್ರ ಸಂಸ್ಥೆಯ ಜಾಗತಿಕ ಅಲ್ಪಸಂಖ್ಯಾತ ಜನಾಂಗಗಳ ಹಕ್ಕುಗಳ ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ೧೪ನೇ ವರ್ಷದ ಗನ್ ಕಾರ್ನಿವಲ್ ತೋಕ್ ನಮ್ಮೆ ನಾಪೋಕ್ಲು ಕೊಳಕೇರಿಯ ನೂರಂಬದ ನಾಡ್‌ನಲ್ಲಿ ಸಂಭ್ರಮದಿಂದ ನಡೆಯಿತು.


ಕೊಳಕೇರಿಯ ನೂರಂಬದ ನಾಡ್‌ನಲ್ಲಿರುವ ರಮ್ಮಿ ನಾಣಯ್ಯ ಹಾಗೂ ರೀನಾ ನಾಣಯ್ಯರವರ ಕಾವೇರಿ ಎಸ್ಟೇಟ್‌ನ ಕಾವೇರಿ ನದಿ ದಂಡೆಯಲ್ಲಿ ನಡೆದ ನಮ್ಮೆಯಲ್ಲಿ ಕೋವಿಗಳನ್ನು ಸಾಂಪ್ರದಾಯಿಕ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಜ್ಯಸಭಾ ಮಾಜಿ ಸದಸ್ಯ, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಹಾಗೂ ವಿರೋಧ ಪಕ್ಷದ ಮಾಜಿ ನಾಯಕ ಬಿ.ಕೆ.ಹರಿಪ್ರಸಾದ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣರವರು ತೋಕ್ ನಮ್ಮೆಗೆ ಸಾಕ್ಷಿಯಾದರು.


ನಮ್ಮೆಯ ನೇತೃತ್ವ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಜನಪದೀಯ ಹಬ್ಬವಾಗಿ ತೋಕ್ ನಮ್ಮೆಯನ್ನು ಅತಿ ಉತ್ಸಾಹದಿಂದ ಸಾರ್ವತ್ರಿಕವಾಗಿ ಆಚರಿಸುವ ಮೂಲಕ ಕೋವಿ ಹೊಂದುವ ಕೊಡವರ ಹಕ್ಕನ್ನು ಪ್ರತಿಪಾದಿಸಲಾಗುತ್ತಿದೆ. ಗನ್ ಕೊಡವ ಜನಾಂಗದ ಧಾರ್ಮಿಕ-ಜನಾಂಗೀಯ ಸಂಸ್ಕಾರವಾಗಿದೆ. ಗತಕಾಲದ ಶ್ರೀಮಂತ ಭಂಡಾರವಾಗಿದೆ. ಇದೇ ಕಾರಣಕ್ಕೆ ಪ್ರಸ್ತುತದಲ್ಲಿ ಮತ್ತು ಭವಿ?್ಯದಲ್ಲಿಯೂ ಈ ನಮ್ಮ ಹಕ್ಕು ಮುಂದುವರಿಯುತ್ತದೆ. ಕೊಡವರು ಶಸ್ತ್ರಾಸ್ತ್ರ/ಬಂದೂಕನ್ನು ಹೊಂದಲು ವಿನಾಯಿತಿ ನೀಡಲಾಗಿದೆ. ಭಾರತವು ಸ್ವಾತಂತ್ರ್ಯ ಪಡೆದ ನಂತರ, ಭಾರತೀಯ ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ ೩ ಮತ್ತು ೪ ರಡಿಯಲ್ಲಿ ಗನ್ ವಿನಾಯಿತಿ ಹಕ್ಕು ಅಸ್ತಿತ್ವದಲ್ಲಿದೆ. ನಮ್ಮ ಹಕ್ಕಿನ ಕುರಿತು ಇಡೀ ವಿಶ್ವಕ್ಕೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ತೋಕ್ ನಮ್ಮೆಯಂತಹ ಕಾರ್ಯಕ್ರಮಗಳ ಮೂಲಕ ಕೋವಿಗಳನ್ನು ಪ್ರದರ್ಶಿಸಿ ಹಕ್ಕನ್ನು ಶಾಶ್ವತಗೊಳಿಸಲಾಗುತ್ತಿದೆ ಎಂದು ತಿಳಿಸಿದರು.


ಗನ್ ಒಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಲಾಂಛನ, ಮಾತ್ರವಲ್ಲ. ಕೊಡವ ಜನಾಂಗದ ಜಾನಪದ ಸಂಕೇತವಾಗಿದೆ. ಈ ಪ್ರಾಚೀನ ಹೆಮ್ಮೆಯನ್ನು ರಕ್ಷಿಸಬೇಕು ಮತ್ತು ಭವಿ?್ಯದ ಪೀಳಿಗೆಗೆ ವರ್ಗಾಯಿಸಬೇಕು. ಆದ್ದರಿಂದ ನಮ್ಮ ಬೇಡಿಕೆಗಳನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.


ಕೊಡವ ವಿಭೂಷಣ ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ೯ ಸಾಧಕರಿಗೆ ತೋಕ್ ನಮ್ಮೆ ಪ್ರಯುಕ್ತ ಸಿಎನ್‌ಸಿ ಸಂಘಟನೆ ಕೊಡವ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿತು. ಶಿಲ್ಪ ಕಲೆಯಲ್ಲಿ ಅಪ್ಪನೆರವಂಡ ಕಿರಣ್ ಸುಬ್ಬಯ್ಯ, ಶಿಕ್ಷಣ ಕ್ಷೇತ್ರದಲ್ಲಿ ಫೀ.ಮಾ.ಕಾರ್ಯಪ್ಪ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ.ಚೌರಿರ ಜಗತ್ ತಿಮ್ಮಯ್ಯ, ಸಹಕಾರ ಕ್ಷೇತ್ರದಲ್ಲಿ ಮಾಚೆಟ್ಟಿರ ಚೋಟು ಕಾವೇರಪ್ಪ, ಸಾಂಸ್ಕೃತಿಕ ಕ್ಷೇತ್ರ ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಕೂಪದಿರ ಶಾರದ ನಂಜಪ್ಪ, ಪ್ರಗತಿಪರ ಕೃಷಿ ಬಾಚರಣಿಯಂಡ ಹ್ಯಾರಿ ತಮ್ಮಯ್ಯ, ಪತ್ರಕರ್ತ ಕಾಯಪಂಡ ಶಶಿ ಸೋಮಯ್ಯ, ಕಲಾ ಕ್ಷೇತ್ರ ಐಮಂಡ ರೂಪೇಶ್ ನಾಣಯ್ಯ, ಸೇನಾ ಕ್ಷೇತ್ರ ನಿವೃತ್ತ ಯೋಧ ಬಚ್ಚಮಂಡ ಬೆಲ್ಲು ಪೂವಪ್ಪ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ನಂದಿನೆರವಂಡ ಟಿಪ್ಪು ಬಿದ್ದಪ್ಪ ಪ್ರಶಸ್ತಿ ಪಡೆದರು.


ಗುಂಡು ಹಾರಿಸುವ ಸ್ಪರ್ಧೆ: ಮಕ್ಕಳು, ಮಹಿಳೆಯರು ಹಾಗೂ ಪುರು?ರಿಗಾಗಿ ಗುಂಡು ಹಾರಿಸುವ ಸ್ಪರ್ಧೆ ನಡೆಯಿತು. ನಮ್ಮೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಂದೂಕುಗಳನ್ನು ಪ್ರದರ್ಶಿಸಿದ ಕೊಡವ ಕೊಡವತಿಯರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ತಮ್ಮ ಕೋವಿ ಹೊಂದುವ ಹಕ್ಕನ್ನು ಪ್ರತಿಪಾದಿಸಿದರು. ಅಲ್ಲದೆ ಕೊಡವ ಲ್ಯಾಂಡ್ ಪರ ಘೋಷಣೆಗಳನ್ನು ಕೂಗಿದರು.


ಕಾರ್ಯಕ್ರಮದಲ್ಲಿ ಕಲಿಯಂಡ ಮೀನಾ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಬಾಚಮಂಡ ಕಸ್ತೂರಿ ಪೂವಪ್ಪ, ಪೆಮ್ಮುಡಿಯಂಡ ಇಂದಿರಾ ಅಪ್ಪಣ್ಣ, ಅಪ್ಪಚ್ಚಿರ ರೀನಾ ನಾಣಯ್ಯ, ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ನಂದಿನೆರವಂಡ ನಿಶಾ ಅಚ್ಚಯ್ಯ, ಮಂದಪಂಡ ರಚನಾ ಮನೋಜ್, ಪುಲ್ಲೇರ ಸ್ವಾತಿ ಕಾಳಪ್ಪ, ನಂದೇಟಿರ ಕವಿತಾ, ಮಂದಪಂಡ ರಮ್ಯ ಸೂರಜ್, ಅಜ್ಜಿನಿಕಂಡ ಪ್ರೇಮಾ, ಅಪ್ಪನೆರವಂಡ ಸ್ವಾತಿ ಕಿರಣ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕೊಡವ ಲ್ಯಾಂಡ್ ಪರ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net