ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಸಂಭ್ರಮಾಚರಣೆ

21
Published on

‘ಚಂದ್ರಯಾನ-3’ ನೌಕೆ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿದು ಐತಿಹಾಸಿಕ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಬುಧವಾರ ನಗರದ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಸಂಭ್ರಮಾಚರಣೆ ನಡೆಯಿತು.

ಬಾಹ್ಯಾಕಾಶದಲ್ಲಿ ಸುವರ್ಣಾಕ್ಷರಗಳ ಸಾಧನೆಗೈದ ಅಮೃತ ಘಳಿಗೆಯನ್ನು ಶಾಲಾ ಮಕ್ಕಳು ಬೃಹತ್ ಎಲ್‌ಇಡಿ ಮೂಲಕ ವೀಕ್ಷಿಸಿ ಖುಷಿಪಟ್ಟರು. ನೌಕೆ ವಿಜ್ಞಾನಿಗಳ ನಿರೀಕ್ಷೆಯಂತೆ ಚಂದ್ರನ ನೆಲ ಸ್ಪರ್ಶ ಮಾಡಿದಾಗ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಶುಭಾಶಯ ವಿನಿಮಯ ಮಾಡಿಕೊಂಡರು. ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದರು.

ಪ್ರಾಂಶುಪಾಲ ಎಸ್.ಬಾಲಾಜಿ ಮಾತನಾಡಿ, ಶ್ರೀ ರಾಮಕೃಷ್ಣ ವಿದ್ಯಾಶಾಲೆಗೂ, ಇಸ್ರೋ ಸಂಸ್ಥೆಗೂ ಅವಿನಾಭಾವ ಸಂಬಂಧ. ಅಲ್ಲಿನ ಅನೇಕ ಮುಖ್ಯಸ್ಥರು ನಮ್ಮ ಶಾಲೆಗೆ ಆಗಮಿಸಿ ಮಕ್ಕಳನ್ನು ಹರಸಿದ್ದಾರೆ. 2000ನೇ ಇಸವಿಯಲ್ಲಿ ಅಂದಿನ ಇಸ್ರೋ ಅಧ್ಯಕ್ಷ ಡಾ.ಕಸ್ತೂರಿ ರಂಗನ್ ನಮ್ಮ ಶಾಲೆಗೆ ಬಂದು ಅರ್ಧ ದಿನ ಕಳೆದಿದ್ದರು. ಸರಳರೂ, ಸಜ್ಜನರೂ ಆದ ಅವರು ನಮ್ಮ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅರ್ಥಪೂರ್ಣ ಭಾಷಣ ಮಾಡಿದ್ದರು. ರಾಕೆಟ್ ಮಾದರಿಗಳನ್ನು ಕಾಣಿಕೆಯಾಗಿ ನೀಡಿದ್ದರು. 2001ರಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಕೂಡ ಸಂಸ್ಥೆಗೆ ಭೇಟಿ ನೀಡಿ, ಎಲ್ಲರನ್ನು ಉದ್ದೇಶಿಸಿ ಭಾಷಣ ಮಾಡಿ ಅಭಿನಂದಿಸಿದ್ದರು. 2008ರಲ್ಲಿ ಡಾ.ಮಾಧವನ್ ನಾಯರ್ ಭೇಟಿ ನೀಡಿದ್ದ ವೇಳೆ ನಮ್ಮ ವಿದ್ಯಾರ್ಥಿಗಳು ಮಾಡಿದ್ದ ‘ಚಂದ್ರಯಾನ’ ಮಾದರಿಯನ್ನು ನೋಡಿ ಅಭಿನಂದಿಸಿದ್ದರು. ಜತೆಗೆ ಸಂಸ್ಥೆಗೆ 50 ಸಾವಿರ ರೂ. ಹಾಗೂ ಚಂದ್ರಯಾನ ಮಾದರಿಗೆ 10 ಸಾವಿರ ರೂ. ನೀಡಿದ್ದರು ಎಂದರು. 2017ರ ವಾರ್ಷಿಕೋತ್ಸವದಲ್ಲಿ ಡಾ.ಕಿರಣ್‌ಕುಮಾರ್ ಭಾಗವಹಿಸಿದ್ದ ಮಾಡಿದ್ದ ಭಾಷಣ ಇಂದಿಗೂ ಹಚ್ಚ ಹಸುರಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net