

ಮೈಸೂರು: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರದಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಬಾಲರಾಮ (ರಾಮಲಲ್ಲಾ) ವಿಗ್ರಹ ಪ್ರತಿಷ್ಠಾಪನೆಗೊಳ್ಳುತ್ತಿರುವ ವಿಷಯ ಅಧಿಕೃತ ಆಗುತ್ತಿದ್ದಂತೆ ಮೈಸೂರಿನ ಅವರ ನಿವಾಸದಲ್ಲಿ ಸೋಮವಾರ ಸಂಭ್ರಮ ಮನೆ ಮಾಡಿತ್ತು.
ನಗರದ ಗನ್‌ಹೌಸ್ ಬಳಿಯ ಕಶ್ಯಪ ಶಿಲ್ಪಕಲಾ ನಿಕೇತನದಲ್ಲಿ ಅರುಣ್ ಯೋಗಿರಾಜ್ ಅವರ ಕುಟುಂಬ ಸದಸ್ಯರು ಸಂಭ್ರಮಿಸಿದರು.
ಆಯೋಧ್ಯೆಯಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್, ಬೆಂಗಳೂರಿನ ಜಿ.ಎಲ್. ಭಟ್ ಹಾಗೂ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರು ತಲಾ ಒಂದು ರಾಮಲಲ್ಲಾ ವಿಗ್ರಹವನ್ನು ಕೆತ್ತನೆ ಮಾಡಿದ್ದರು. ಈ ಪೈಕಿ ಅರುಣ್ ಯೋಗಿರಾಜ್ ಕೆತ್ತನೆಯ ವಿಗ್ರಹವನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದ್ದು, ಜ.22 ರಂದು ಪ್ರತಿಷ್ಠಾಪಿಸಲಾಗುತ್ತಿದೆ.
ಈ ವಿಷಯ ತಿಳಿಯುತ್ತಿದಂತೆ ಶಿಲ್ಪಿ ಅರುಣ್ ಯೋಗಿರಾಜ್ ತಾಯಿ ಸರಸ್ವತಿ, ಪತ್ನಿ ವಿಜೇತಾ, ಪುತ್ರಿ ಸಾನ್ವಿ, ಪುತ್ರ ವೇದಾಂತ್, ಸಹೋದರಿ ಚೇತನಾ, ಬಾವ ಸುನೀಲ್, ಚಿಕ್ಕಮ್ಮ ಚಂದ್ರಕಲಾ, ಚಿಕ್ಕಪ್ಪ ಶಿವಶಂಕರ್, ಸಹೋದರ ಸೂರ್ಯಪ್ರಕಾಶ್ ಸೇರಿದಂತೆ ಕುಟುಂಬ ಸದಸ್ಯರ ಸಂಭ್ರಮ ಮುಗಿಲು ಮುಟ್ಟಿತ್ತು.
‘ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯ ರಾಮಲಲ್ಲಾ ವಿಗ್ರಹವನ್ನು ಪ್ರಾಣ ಪ್ರತಿಷ್ಠೆ ಮಾಡಲು ರಾಮಜನ್ಮ ಭೂಮಿ ಟ್ರಸ್ಟ್ ನಿರ್ಧಾರ ಕೈಗೊಂಡಿರುವುದು ಖುಷಿಯಾಗಿದೆ. ಇದು ಇಡೀ ಭಾರತ ಹೆಮ್ಮೆಪಡುವ ವಿಚಾರವಾಗಿದೆ’ ಎಂದು ಕುಟುಂಬದವರು ಖುಷಿ ಹಂಚಿಕೊಂಡರು. ಮಗನ ಸಾಧನೆ ಕಂಡು ತಾಯಿ ಆನಂದಭಾಷ್ಪ ಸುರಿಸಿದರೆ, ಪತ್ನಿ ವಿಜೇತಾ ಪತಿಯ ಸಾಧನೆ ಕಂಡು ಬೀಗಿದರು.