

ಮುಧೋಳ: ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದೇ ಯೋಗ. ದೇಶಕ್ಕೆ ಸೀಮಿತವಾಗಿದ್ದ ಯೋಗ ವಿದ್ಯೆಯನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಜಾಗತಿಕ ವಿಶ್ವ ಶಾಂತಿಗಾಗಿ ಯೋಗ ದಿನ ಆಚರಣೆಗೆ ಬಂದಿದೆ ಎಂದು ಪತಂಜಲಿ ಭಾರತ ಸ್ವಾಭಿಮಾನ ಟ್ರಸ್ಟ್ ಅಧ್ಯಕ್ಷ ಸುರೇಶ ಜೈನ್ ಹೇಳಿದರು.
ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಸಂಗಮನಾಥ ಶಾಲಾ ಆವರಣದಲ್ಲಿ ತ್ರಿವೇಣಿ ಶಿಕ್ಷಣ ಸಂಸ್ಥೆ ಹಾಗೂ ‘ವಿಜಯವಾಣಿ’ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಯೋಗ ನೃತ್ಯ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ, ಬಳಿಕ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಹೇಳಿಕೊಡುತ್ತ ಮಾತನಾಡಿದರು.
ತ್ರಿವೇಣಿ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಶಿಶಿರ ಮಲಘಾಣ ಮಾತನಾಡಿ, ರೋಗಮುಕ್ತ ಬದುಕಿಗೆ ಯೋಗ ಸಹಕಾರಿ. ನಿತ್ಯ ಪ್ರತಿಯೊಬ್ಬರೂ ಲವಲವಿಕೆಯಿಂದ, ಉತ್ಸಾಹದಿಂದ ಕಾರ್ಯನಿರ್ವಹಿಸಲು ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ವಿದೇಶಿ ಸಂಸ್ಕೃತಿಗೆ ಮಾರುಹೋದ ನಾವು ನಮ್ಮದೇ ಯೋಗವನ್ನು ವಿದೇಶಿಗರು ಸ್ವೀಕರಿಸಿದ ಬಳಿಕ ಮತ್ತೆ ನಮ್ಮ ದೇಶದಲ್ಲಿ ಯೋಗದ ಆಸಕ್ತಿ ಹೆಚ್ಚಾಗಿದೆ ಎಂದರು.
ಪ್ರಾಧ್ಯಾಪಕಿ ಡಾ. ವಿದ್ಯಾ ಮುಳ್ಳೂರ ಮಾತನಾಡಿ, ಜೂ. 21ನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನ ಯೋಗದ ಮಹತ್ವ, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದಾಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸಲಾಗುತ್ತದೆ. ಜಗತ್ತಿನ 272 ರಾಷ್ಟ್ರಗಳು ಇಂದು ಯೋಗ ದಿನಾಚರಣೆ ಆಚರಿಸುತ್ತಿರುವುದು ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.
ಆಡಳಿತಾಧಿಕಾರಿ ಮಲ್ಲು ಕಳ್ಳೆನ್ನವರ, ಪ್ರಾಚಾರ್ಯ ಸುರೇಶ ಭಜಂತ್ರಿ ಮುಖ್ಯಶಿಕ್ಷಕ ವೆಂಕಟೇಶ ಗುಡೆಪ್ಪನವರ, ಪಲ್ಲವಿ ಬಸವನಾಳ, ಸೌಮ್ಯ ಕಳೆನ್ನವರ, ಶಾಂತಲಾ ಸತ್ಯನಾಯಕ, ಪ್ರತಿಭಾ ಚವ್ಹಾಣ ಇತರರಿದ್ದರು.
ಶ್ರೀ ಸಂಗಮನಾಥ ಕನ್ನಡ ಮಾಧ್ಯಮ ಹಾಗೂ ಸಿಬಿಎಸ್‌ಇ ವಿದ್ಯಾರ್ಥಿಗಳು, ಯೋಗ ನೃತ್ಯ ಪ್ರದರ್ಶಿಸಿದರು. ಯೋಗಾಭ್ಯಾಸದಲ್ಲಿ ಅಪಾರ ಜನತೆ ಪಾಲ್ಗೊಂಡಿತ್ತು.