

ಮಂಡ್ಯ: ತಾಂತ್ರಿಕ ಮತ್ತು ವೈಜ್ಞಾನಿಕವಾಗಿ ಎಷ್ಟೇ ಮುಂದೆ ಹೋಗುತ್ತಿದ್ದರೂ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳದೆ ಇರುವುದರಿಂದ ಇತ್ತೀಚೆಗೆ ಹೃದಯ ಸಂಬಂದಿತ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಸ್ಪಂದನಾ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ಜೀವನ ಅತಿ ಅಮೂಲ್ಯವಾದದ್ದು. ಈ ನಿಟ್ಟಿನಲ್ಲಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬುದನ್ನು ಪ್ರತಿಯೊಬ್ಬರು ತಿಳಿದು ಕೊಳ್ಳಬೇಕು ಎಂದರು.
ಹೃದಯ ಮನುಷ್ಯನ ಜೀವಂತಿಕೆ ಸಂಕೇತ. ಹೃದಯದ ಬಡಿತದೊಂದಿಗೆ ಶುರುವಾಗುವ ಜೀವನ ಸದ್ದು ನಿಲ್ಲುವುದರೊಂದಿಗೆ ಕೊನೆಯಾಗುತ್ತದೆ. ಜೀವನ ಶೈಲಿಯಲ್ಲಿ ಮಾಡಿಕೊಳ್ಳುವ ಸಣ್ಣಪುಟ್ಟ ಬದಲಾವಣೆ ಹೃದಯ ಮತ್ತು ಬದುಕನ್ನು ಜೋಪಾನವಾಗಿಡುತ್ತವೆ.ಬೇರೆಯವರಿಗಾಗಿ ಮಿಡಿಯುವ ಹೃದಯ ತನ್ನ ಆರೋಗ್ಯಕ್ಕೂ ಮಿಡಿಯುವಂತಾಗಲಿ ಎಂದು ಆಶಿಸಿದರು.
ಹೃದ್ರೋಗ ತಜ್ಞೆ ಡಾ.ಹೇಮಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಜೀವನಶೈಲಿ, ಒತ್ತಡ, ಅನಾರೋಗ್ಯಕರ ಆಹಾರ ಮತ್ತು ದೈಹಿಕ ಚಟುವಟಿಕೆಗಳ ಕೊರತೆಯ ಕಾರಣದಿಂಗಾಗಿ ಹೃದಯ ಸಂಬಂಧಿ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ಅದರಲ್ಲೂ ಹೃದಾಯಾಘಾತದಿಂದ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅದೇ ಉತ್ತಮ ಜೀವನಶೈಲಿ, ಆರೋಗ್ಯಕರ ಆಹಾರ ಪದ್ಧತಿ, ದೈಹಿಕ ಚಟುವಟಿಕೆ ಸೇರಿದಂತೆ ಆರೋಗ್ಯಕರ ಅಭ್ಯಾಸ ಅಳವಡಿಸಿಕೊಳ್ಳುವ ಮೂಲಕ ಹೃದಯದ ಆರೋಗ್ಯ ವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ಹೃದಯ ಸಂಬಂಧಿ ಕಾಯಿಲೆಗಳು ವೃದ್ಧಾಪ್ಯದಲ್ಲಿ ಮಾತ್ರ ಬಾಧಿಸುವುದಿಲ್ಲ. ಬದಲಾಗಿ ಯುವಜನರ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನು ಜನರಿಗೆ ತಿಳಿಸುವುದು ವಿಶ್ವ ಹೃದಯ ದಿನದ ಉದ್ದೇಶವಾಗಿದೆ ಎಂದು ತಿಳಿಸಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಪ್ರತಿಯೊಬ್ಬರಿಗೂ ಹೃದಯದ ಬಗ್ಗೆ ಹೆಚ್ಚಾಗಿ ಗಮನಕೊಡಬೇಕು. ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದರಿಂದ ದೇಹದ ಆರೋಗ್ಯ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಸ್ಪಂದನಾ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಆದಿತ್ಯಗೌಡ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ನಿರ್ದೇಶಕರಾದ ಮಂಗಲ ಯೋಗೇಶ್, ಟಿ.ನಾರಾಯಣಸ್ವಾಮಿ, ರಕ್ಷಿತ್, ಮಂಗಲ ಲಂಕೇಶ್ ಇತರರಿದ್ದರು.
ಎಸ್.ಡಿ.ಜಯರಾಂ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಪ್ಯಾರಾಮೆಡಿಕಲ್ ಸೈನ್ಸ್, ಬಿಎಸ್‌ಎಲ್ ಸ್ಕೂಲ್ ಆಫ್ ನರ್ಸಿಂಗ್ ಆ್ಯಂಡ್ ಪ್ಯಾರಾ ಮೆಡಿಕಲ್ ಸೈನ್ಸ್, ಎಇಟಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್, ಡಾ.ಸರ್.ಎಂ.ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.