

ಮುಂಡರಗಿ: ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ವಿಶ್ವಧರ್ಮ ಪ್ರವಚನ ಮಂಗಲೋತ್ಸವ ನಿಮಿತ್ತ ಪಟ್ಟಣದಲ್ಲಿ ಶನಿವಾರ ಬಸವಣ್ಣನವರ, ಯಡೆಯೂರ ಶ್ರೀ ಸಿದ್ಧಲಿಂಗೇಶ್ವರ ಶಿವಯೋಗಿಗಳ ಭಾವಚಿತ್ರ ಹಾಗೂ ಶರಣರ ವಚನ ಗ್ರಂಥಗಳ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು. ಶ್ರೀಮಠದ ಪೀಠಾಧಿಪತಿ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.
ಮಹಿಳಾ ಡೊಳ್ಳು ಕುಣಿತ, ವೀರಗಾಸೆ, ಭಾಜಾ ಭಜಂತ್ರಿ ಮೊದಲಾದ ಮಂಗಳವಾದ್ಯಗಳೊಂದಿಗೆ ಶ್ರೀ ಮಠದಿಂದ ಹೊರಟ ಮೆರವಣಿಗೆ ಪಟ್ಟಣದ ವಿವಿಧ ಭಾಗಗಳಲ್ಲಿ ಸಂಚರಿಸಿ ಪುನಃ ಮಠಕ್ಕೆ ಆಗಮಿಸಿತು. ಮಠದ ಆವರಣದ ಒಳಗೆ ಮಹಿಳೆಯರು ಪಲ್ಲಕ್ಕಿ ಹೊತ್ತು ಸಾಗಿದ್ದು ಗಮನ ಸೆಳೆಯಿತು.
ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಮಳೆ ಕೊರತೆಯಿಂದ ರೈತರಿಗೆ, ಜನರಿಗೆ ತೊಂದರೆಯಾಗಿದೆ. ನಾಡಿಗೆ ಸಮೃದ್ಧ ಮಳೆಯಾಗಿ ಉತ್ತಮ ಬೆಳೆ ಬರಬೇಕು. ರೈತರು ಬೆಳೆ ಬೆಳೆದರೆ ಮಾತ್ರ ಎಲ್ಲರೂ ಚೆನ್ನಾಗಿರಲು ಸಾಧ್ಯ. ಬಸವಾದಿ ಶರಣರ ತತ್ವ ಸಿದ್ಧಾಂತದ ಪ್ರಕಾರ ತೋಂಟದ ಯಡೆಯೂರು ಪರಂಪರೆಯಲ್ಲಿ ಮುಂಡರಗಿ ತೋಂಟದಾರ್ಯ ಮಠದಿಂದ ಮೊಟ್ಟ ಮೊದಲಿಗೆ ಮಹಿಳೆಯರಿಗೂ ಪಲ್ಲಕ್ಕಿ ಹೊರಲು ಅವಕಾಶ ಮಾಡಿಕೊಟ್ಟಿದೆ. ಹೆಣ್ಣು- ಗಂಡು ಎನ್ನುವ ಬೇಧ ಭಾವವಿಲ್ಲ. ಹೆಣ್ಣು ಮಕ್ಕಳಿಗೂ ಸಮಾನತೆ ಕೊಡಬೇಕು ಎಂದರು.
ಮಂಗಳಾ ಶೀರಿ, ಮಂಗಳಾ ಕರ್ಜಗಿ ಮಾತನಾಡಿ, ಹೆಣ್ಣು ಮಕ್ಕಳು ಪಲ್ಲಕ್ಕಿ ಹೊರುವುದನ್ನು ಕಂಡಿದ್ದಿಲ್ಲ. ಪಲ್ಲಕ್ಕಿ ಹೊರಲು ಅವಕಾಶ ಕೊಟ್ಟಿದ್ದು ತುಂಬಾ ಸಂತೋಷವಾಗಿದೆ ಎಂದರು.
ಶ್ರೀ ಗೋಣಿರುದ್ರ ದೇವರು, ಪವನ ಚೋಪ್ರಾ, ಓಂಪ್ರಕಾಶ ಲಿಂಗಶೆಟ್ಟರ, ದೇವು ಹಡಪದ, ಶಿವಕುಮಾರ ಬೆಟಗೇರಿ, ವಿಶ್ವನಾಥ ಉಳ್ಳಾಗಡ್ಡಿ, ವೀರೇಂದ್ರ ಅಂಗಡಿ, ಎಚ್. ವಿರುಪಾಕ್ಷಗೌಡ, ಕೊಟ್ರೇಶ ಅಂಗಡಿ, ಪಾಲಾಕ್ಷಿ ಗಣದಿನ್ನಿ, ದೇವಪ್ಪ ರಾಮೇನಹಳ್ಳಿ, ಸದಾಶಿವಯ್ಯ ಕಬ್ಬೂರಮಠ, ಗಿರೀಶಗೌಡ ಪಾಟೀಲ, ಅಶೋಕ ಹುಬ್ಬಳ್ಳಿ, ಶಿವಯೋಗಿ ಕೊಪ್ಪಳ, ಉಮೇಶ ಹಿರೇಮಠ, ಸುಕನ್ಯಾ ಕಬ್ಬೂರಮಠ, ನೀಲಮ್ಮ ಗಿಂಡಿಮಠ, ಪುಷ್ಪಾ ಶೀರಿ, ಶಿವಗಂಗಾ ನವಲಗುಂದ, ರತ್ನಕ್ಕ ನವಲಗುಂದ, ರಂಚಿತಾ ಲಿಂಗಶೆಟ್ಟರ, ಇತರರಿದ್ದರು.