ಶ್ರದ್ಧಾಭಕ್ತಿಯಿಂದ ವರಮಹಾಲಕ್ಷ್ಮೀ ಹಬ್ಬ ಆಚರಣೆ

16ss2kanivebasavanalli puje
Published on

ಶನಿವಾರಸಂತೆ: ಶುಕ್ರವಾರ ನಡೆದ ವರಮಹಾಲಕ್ಷ್ಮೀ ಹಬ್ಬವನ್ನು ಶನಿವಾರಸಂತೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗಳಲ್ಲಿ ಮಹಿಳೆಯರು ಶ್ರದ್ಧಾಭಕ್ತಿಯಿಂದ ಆಚರಿಸಿದರು.


ಪಟ್ಟಣ ಮತ್ತು ಹಳ್ಳಿಯ ಮನೆಗಳಲ್ಲಿ ಶುಕ್ರವಾರ ಮುಂಜಾನೆಯಿಂದಲೇ ಮಹಿಳೆಯರು ವರಮಹಾಲಕ್ಷ್ಮೀ ದೇವಿಯ ಪೂಜೆಗೆ ಸಿದ್ಧತೆ ನಡೆಸಿದರು. ಮನೆ ಮುಂಭಾಗದಲ್ಲಿ ರಂಗೋಲಿ ಬಿಡಿಸಿದರು. ಮನೆಯ ದೇವರ ಕೋಣೆಯಲ್ಲಿ ಬಾಳೆ ಕಂದು, ಕಬ್ಬಿನ ಜಲ್ಲೆ ಮತ್ತು ಹೂವುಗಳಿಂದ ಮಂಟಪವನ್ನು ಅಲಂಕರಿಸಿ ಅದರಲ್ಲಿ ವರಮಹಾಲಕ್ಷ್ಮೀ ದೇವಿಯ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ಮಂಟಪದೊಳಗೆ ಕಳಸವನ್ನಿಟ್ಟು ಹಣತೆ ಹಚ್ಚಿ, ಹಣ್ಣು, ಕಾಯಿ, ಫಲ ತಾಂಬೂಲ, ದೇವಿಗೆ ಪ್ರಿಯವಾದ ನೈವೇದ್ಯ ಹಾಗೂ ಚಿನ್ನಾಭರಣ, ಹಣ ನಗದು ಸೇರಿದಂತೆ ಅಮೂಲ್ಯ ವಸ್ತುಗಳನ್ನಿಟ್ಟು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.


ಮನೆಯ ಗೃಹಿಣಿ ವರಮಹಾಲಕ್ಷ್ಮೀ ದೇವಿಗೆ ಪೂಜೆ ನೆರವೇರಿಸಿದರು. ಈ ಸಂದರ್ಭ ಮನೆಯ ಕುಟುಂಬ ಸದಸ್ಯರು ಸೇರಿದಂತೆ ಅಕ್ಕಪಕ್ಕದ ಮನೆಯ ಮಹಿಳೆಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು.


ವರಮಹಾಲಕ್ಷ್ಮೀ ದೇವಿ ಪೂಜೆ ಪ್ರಯುಕ್ತ ಪೂಜೆಯಲ್ಲಿ ಪಾಲ್ಗೊಂಡವರಿಗೆ ತೀರ್ಥ ಪ್ರಸಾದ ವಿನಿಯೋಗದ ನಂತರ ಸಿಹಿ ಭೋಜನ ಸಂತರ್ಪಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net