ಬಸವಣ್ಣ ಕರ್ನಾಟಕ ಸಾಂಸ್ಕೃತಿಕ ನಾಯಕ ಘೋಷಣೆ ಹಿನ್ನೆಲೆ: ನಗರದಲ್ಲಿ ಪ್ರಗತಿಪರ ಸಂಘಟನೆಗಳ ಸಂಭ್ರಮಾಚರಣೆ

Celebrating Progressive Organizations mandya
Published on

ಮಂಡ್ಯ: ವಿಶ್ವಗುರು ಬಸವಣ್ಣ ಅವರನ್ನು ರಾಜ್ಯಸರ್ಕಾರ ’ಕರ್ನಾಟಕ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿರುವುದನ್ನು ಅಭಿನಂದಿಸಿ ಪ್ರಗತಿಪರ ಸಂಘಟನೆಗಳು ಗುರುವಾರ ನಗರದಲ್ಲಿ ಸಂಭ್ರಮಾಚರಣೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಸಂಘಟನೆ ಕಾರ್ಯಕರ್ತರು, ಬಸವಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಸಿಹಿ ವಿತರಿಸಿ ಸಂಭ್ರಮಿಸಿದರಲ್ಲದೆ ಬಸವತತ್ವಗಳು ಚಿರಾಯುವಾಗಲಿ, ಸಮಸಮಾಜ ನಿರ್ಮಾಣವಾಗಲಿ ಎಂಬ ಘೋಷಣೆ ಕೂಗಿದರು. ಬಳಿಕ ಜಿಪಂ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಡಾ.ಕುಮಾರ ಅವರ ಮೂಲಕ ಸರ್ಕಾರಕ್ಕೆ ಅಭಿನಂದನಾ ಪತ್ರ ಸಲ್ಲಿಸಲಾಯಿತು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಜಾತಿ ಮತ್ತು ಧರ್ಮ ರಾಜಕೀಕರಣಗೊಂಡು ಅಸಮಾನತೆ ಹಾಗೂ ಸಂಘರ್ಷ ಉಲ್ಬಣಗೊಳ್ಳುತ್ತಿದೆ. ಈ ಸಮಯದಲ್ಲಿ ರಾಜ್ಯಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಉತ್ತಮವಾಗಿದೆ. ಅವರ ತತ್ವ, ಸಿದ್ಧಾಂತಗಳನ್ನು ಸಮಸಮಾಜ ನಿರ್ಮಾಣಕ್ಕೆ ಪ್ರಚಾರಪಡಿಸುವುದು ಅನಿವಾರ್ಯ ಎಂದು ಪ್ರತಿಪಾದಿಸಿದರು.

ಸಾಂಸ್ಕೃತಿಕ ನಾಯಕತ್ವ ಘೋಷಣೆಗೆ ಸೀಮಿತವಾಗದೆ ಜನಮನದಲ್ಲಿ ಬಸವಣ್ಣನವರ ವಿಚಾರ ಕ್ರಾಂತಿಗಳನ್ನು ಮೂಡಿಸುವ ಮತ್ತು ಶ್ರಮಿಕ ಸಂಸ್ಕೃತಿಯನ್ನು ಪೋಷಿಸುವ ಕಾರ್ಯ ಆಗಬೇಕಿದೆ. 12ನೇ ಶತಮಾನದಲ್ಲೇ ಜಾತಿ, ಧರ್ಮ, ಮತ್ತು ಲಿಂಗಭೇದವನ್ನು ಮೀರಿ ಸೃಷ್ಟಿಸಿದ ಅನುಭವಮಂಟಪ ಇಂದಿನ ರಾಜಕೀಯ ವ್ಯವಸ್ಥೆಗೆ ಮಾದರಿಯಾಗಬೇಕು ಎಂದರು.

ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್, ಜಿಪಂ ಮಾಜಿ ಸದಸ್ಯ ಕುಮಾರರಾಜು, ವಿವಿಧ ಸಂಘಟನೆಯ ಶಿವಕುಮಾರ್, ಎಂ.ಕೃಷ್ಣ, ಸಿದ್ದಶೆಟ್ಟಿ, ಪ್ರತಾಪ್, ಬಸವರಾಜು, ಪ್ರದೀಪ್, ಆನಂದ್, ದಾಸಪ್ಪ, ಡಿ.ರಮೇಶ್, ಮಂಚಶೆಟ್ಟಿ, ಪುಟ್ಟಸ್ವಾಮಿ, ಹನುಮಂತಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net